ವಿರಾಜಪೇಟೆ NEWS DESK ಅ.6 : ಸಂವಿಧಾನವನ್ನು ಓದಿ ಅರ್ಥೈಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ ನಿವೃತ್ತ ಜಸ್ಟಿಸ್ ನಾಗಮೋಹನ್ ದಾಸ್ ತಿಳಿಸಿದ್ದಾರೆ. ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜ್ ನಲ್ಲಿ ಕಾಲೇಜ್ ನ ಮಾನವ ಹಕ್ಕುಗಳ ಘಟಕ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ “ಭಾರತದ ಸಂವಿಧಾನದ ಮೂಲಾಂಶಗಳು” ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ಪ್ರಜಾಪ್ರಭುತ್ವಕ್ಕೆ ಸಂವಿಧಾನ ತಳಹದಿಯಾಗಿದೆ. ಸಂವಿಧಾನವನ್ನು ಓದದಿದ್ದರೆ ಕಾನೂನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ನೀಡಿದ್ದು, ಸಾಮಾಜಿಕ ನ್ಯಾಯದ ಅಂಶಗಳನ್ನು ಎತ್ತಿ ಹಿಡಿದಿದೆ. ಪ್ರತಿಯೊಬ್ಬರು ದೇಶದ ಇತಿಹಾಸ, ಆರ್ಥಿಕ ಪರಿಸ್ಥಿತಿ, ಕಾನೂನು, ಹಕ್ಕುಗಳು, ರಾಜಕೀಯ ಅಂಶಗಳನ್ನು ಓದಿ ತಿಳಿಯಬೇಕು. ಸಂವಿಧಾನಕ್ಕೆ ಗೌರವವನ್ನು ನೀಡುವ ಮೂಲಕ ಈ ನೆಲದ ಕಾನೂನನ್ನು ಗೌರವಿಸಬೇಕು ಎಂದು ಕರೆ ನೀಡಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕÀ ರೆ.ಫಾ.ಜೇಮ್ಸ್ ಡೊಮಿನಿಕ್ ಅವರು ಮಾತನಾಡಿ ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ದೇಶದ ಮೂಲಭೂತ ಕಾನೂನಾಗಿದ್ದು, ಅದನ್ನು ಅನುಸರಿಸಿ ಅದಕ್ಕೆ ಬದ್ಧರಾಗಿ ನಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅವರು, ಸಂವಿಧಾನದ ಮೂಲಾಂಶಗಳನ್ನು ಓದಿದಾಗ ಮಾತ್ರ ನಮ್ಮ ದೇಶದ ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರಿಯಲು ಸಾಧ್ಯ ಎಂದು ತಿಳಿಸಿದರು. ಕಾಲೇಜ್ ನ ಮಾನವ ಹಕ್ಕುಗಳ ಘಟಕದ ಸಂಚಾಲಕಿ ಶಶಿಕಲಾ, ಐಕ್ಯೂಎಸಿ ಸಂಚಾಲಕಿ ಹೇಮ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಅರ್ಜುನ್ ಸ್ವಾಗತಿಸಿ, ವಿದ್ಯಾರ್ಥಿನಿ ನಾಜಿಯಾ ನಿರೂಪಿಸಿ, ಎನ್ ಎಸ್ ಎಸ್ ಅಧಿಕಾರಿ ಶಾಂತಿಭೂಷಣ್ ವಂದಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.