ಮಡಿಕೇರಿ NEWS DESK ಅ.6 : ಮಡಿಕೇರಿ ದಸರಾ ಸಮಿತಿ ಮತ್ತು ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಭಾನುವಾರ ಟಿಟಿ, ಕೇರಂ ಹಾಗೂ ಚೆಸ್ ಸ್ಪರ್ಧೆ ನಡೆಯಿತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಡಿಕೇರಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ ಕರ್ಕೆರ ಮಾತನಾಡಿ, ಈಗಾಗಲೇ ತಾಲೂಕು ಮಟ್ಟದ ರಸ್ತೆ ಓಟ, ಮುಕ್ತ ಫುಟ್ಬಾಲ್ ಪಂದ್ಯಾಟ ನಡೆದಿದೆ. ಕೆಲವು ಸ್ಪರ್ಧೆಗಳು ಭಾನುವಾರ ನಡೆದಿದೆ. ಅದೇ ರೀತಿ ಪತ್ರಕರ್ತರಿಗಾಗಿ ವಿವಿದ ಕ್ರೀಡಾಕೂಟ ಆಯೋಜಿಸಲಾಗಿದೆ. ಅ.9 ರಂದು ಚೆಸ್ ಮತ್ತು ಕೇರಂ ಪಂದ್ಯಾಟ ನಡೆಯಲಿದೆ. ಅ.10 ರಂದು ಮ್ಯಾಟ್ ಕಬಡ್ಡಿ ನಡೆಯಲಿದೆ. ಕ್ರೀಡಾಕೂಟಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ದಸರಾ ನಾಡ ಹಬ್ಬ. ಇಂತಹ ಸಂದರ್ಭ ಎಲ್ಲರನ್ನೂ ಒಗ್ಗೂಡಿಸಲು ದಸರಾ ಕ್ರೀಡಾ ಸಮಿತಿ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಒತ್ತಡದಲ್ಲಿರುವ ಪತ್ರಕರ್ತರಿಗೆ ಇಂದು ಕೊಂಚ ವಿರಾಮ ಸಿಕ್ಕಿದಂತಾಗಿದೆ ಎಂದರು. ಈ ಸಂದರ್ಭ ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ.ಬಿ.ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ದಸರಾ ಕ್ರೀಡಾ ಸಮಿತಿ ಸದಸ್ಯ ಸುರ್ಜಿತ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪತ್ರಕರ್ತರು ಪಾಲ್ಗೊಂಡಿದ್ದರು. ಪ್ರಸ್‌ಕ್ಲಬ್ ಸದಸ್ಯರಾದ ಆನಂದ್ ಕೊಡಗು ನಿರುಪಿಸಿದರೆ, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜಾ ಸ್ವಾಗತಿಸಿ, ಸದಸ್ಯ ರಾಕೇಶ್ ವಂದಿಸಿದರು. ಕ್ರೀಡಾಕೂಟದ ಫಲಿತಾಂಶ: ಮಹಿಳೆಯರ ವಿಭಾಗದಲ್ಲಿ ನಡೆದ ಕೇರಂ ಸಿಂಗಲ್ಸ್ನಲ್ಲಿ ಸವಿತಾ ರೈ ಪ್ರಥಮ ಸ್ಥಾನ ಪಡೆದರೆ, ಉಕ್ಕೇರಂಡ ವಿಶ್ಮ ಪೆಮ್ಮಯ್ಯ ದ್ವಿತೀಯ ಸ್ಥಾನ ಪಡೆದರು. ಟಿಟಿ ಸಿಂಗಲ್ಸ್ ನಲ್ಲಿ ಉದಿಯಂಡ ಜಯಂತಿ ಪ್ರಥಮ ಸ್ಥಾನ ಪಡೆದರೆ, ಸವಿತಾ ರೈ ದ್ವಿತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ನಡೆದ ಚೆಸ್ ಪಂದ್ಯದಲ್ಲಿ ಎಸ್.ಎ.ರಿಜ್ವಾನ್ ಹುಸೇನ್(ಪ್ರ) ಸ್ಥಾನ ಪಡೆದರೆ, ಕೆ.ಎಲ್.ವರುಣ್ ದ್ವಿತೀಯ ಸ್ಥಾನ ಪಡೆದರು. ಪುರುಷರ ಕೇರಂ ಸಿಂಗಲ್ಸ್ ವಿಭಾಗದಲ್ಲಿ ನವೀನ್ ಡಿಸೋಜಾ(ಪ್ರ), ವಿಶ್ವ ಕುಂಬೂರು(ದ್ವಿ) ಸ್ಥಾನ ಪಡೆದರೆ, ಕೇರಂ ಡಬಲ್ಸ್ ವಿಭಾಗದಲ್ಲಿ ರಜಿತ್ ಕುಮಾರ್ ಮತ್ತು ವಿಶ್ವ ಕುಂಬೂರು(ಪ್ರ), ಶಿವರಾಜ್ ಮತ್ತು ಮಂಜುನಾಥ್ (ದ್ವಿ) ಸ್ಥಾನ ಪಡೆದರು. ಪುರುಷರ ಟಿಟಿ ಸಿಂಗಲ್ಸ್ ವಿಭಾಗದಲ್ಲಿ ಗೋಪಾಲ್ ಸೋಮಯ್ಯ(ಪ್ರ), ಗಣೇಶ್ ಕಾಫಿಲ್ಯಾಂಡ್(ದ್ವಿ) ಸ್ಥಾನ ಪಡೆದರೆ, ಡಬಲ್ಸ್ ವಿಭಾಗದಲ್ಲಿ ಗಣೇಶ್ ಕಾಫಿ ಲ್ಯಾಂಡ್ ಮತ್ತು ಅಲ್ಲಾರಂಡ ವಿಠಲ(ಪ್ರ), ವಿನೋದ್ ಮೂಡಗದ್ದೆ ಮತ್ತು ದಿವಾಕರ್(ದ್ವಿ) ಸ್ಥಾನ ಪಡೆದರು.