ಮಡಿಕೇರಿ ಅ.9 NEWS DESK : ಕೊಡವರ ಸ್ವಾಧೀನದಲ್ಲಿರುವ ಯುಗ ಯುಗಗಳ ಭೂಮಿಯನ್ನು 30 ವರ್ಷಗಳಿಗೆ ಗುತ್ತಿಗೆಗೆ ನೀಡುವ ಸರ್ಕಾರದ ಯೋಜನೆಯನ್ನು ದುಷ್ಟಕೂಟಗಳು ವಿಫಲಗೊಳಿಸಲು ಯತ್ನಿಸುತ್ತಿವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‍ಸಿ ವತಿಯಿಂದ ಅಮ್ಮತ್ತಿಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡವರಿಗೆ ಭೂಮಿ ಸಿಗದಂತೆ ಮಾಡಿ ಸಂಕಷ್ಟಕ್ಕೆ ಸಿಲುಕಿಸಿ ಆತಂಕಕ್ಕೆ ತಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಕೊಡಗಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಬಂಡವಾಳಶಾಹಿಗಳು ಹಾಗೂ ಅವರು ಕರೆ ತಂದಿರುವ ಜನರಿಂದ ಇಲ್ಲಿನ ಪರಿಸರ, ಪ್ರಕೃತಿ, ಸಂಸ್ಕೃತಿ, ಜಲಮೂಲ, ಸಾಮಾಜಿಕ ಭದ್ರತೆ ಮತ್ತು ಜನಾಂಗೀಯ ಶಾಸ್ತ್ರ ಸಂಪೂರ್ಣ ಬುಡಮೇಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದ್ದು, ಇವರು ಇಂದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್ ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ. ಈ ಕಾಯ್ದೆ ಅಡಿಯಲ್ಲಿ ಹೊರ ರಾಜ್ಯ, ಹೊರ, ದೇಶದ ಉದ್ಯಮಪತಿಗಳು ಎಗ್ಗಿಲ್ಲದೆ ಕೊಡವ ಲ್ಯಾಂಡ್‍ನಲ್ಲಿ ಭೂ ಕಬ್ಜದಲ್ಲಿ ತೊಡಗಿದ್ದರೆ, ಅವರು ಕರೆ ತಂದಿರುವ ಹೊರ ರಾಜ್ಯದ ಮತ್ತು ಶತ್ರು ರಾಷ್ಟ್ರದ ಕಾರ್ಮಿಕರು ಇಲ್ಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಡೆದು ಭೂರಹಿತ ಶೋಷಿತರೆಂದು ಬಿಂಬಿಸುವ ಮೂಲಕ ಅಕ್ರಮ-ಸಕ್ರಮ ಮತ್ತು ಆಶ್ರಯ ಯೋಜನೆಯ ಫಲಾನುಭವಿಗಳಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ಇಲ್ಲಿನ ಜನಸಂಖ್ಯಾ ಶಾಸ್ತ್ರದ ಪಲ್ಲಟಕ್ಕೆ ಕಾರಣವಾಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹದಗೆಡುವಂತೆ ಮಾಡುತ್ತಿದ್ದಾರೆ. ಇವರಿಗೆ ಭ್ರಷ್ಟರು ಹಾಗೂ ರಾಜಕೀಯ ಸಂಕುಲಗಳ ಬೆಂಬಲವಿದೆ ಎಂದು ಆರೋಪಿಸಿದರು. ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಕಪ್ಪು ಹಣ ಹೊಂದಿರುವವರು ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಪತಿಗಳು ಹಾಗೂ ಬಂಡವಾಳಶಾಹಿಗಳು ಇಡೀ ಕೊಡಗಿನಲ್ಲಿ ವ್ಯಾಪಿಸಿದ್ದು, ಪಾಕೃತಿಕ ಕೊಡುಗೆಗಳನ್ನು ಆವರಿಸಿಕೊಂಡಿದ್ದಾರೆ. ಸರ್ಕಾರ ಆದಾಯವನ್ನಷ್ಟೇ ಗುರಿ ಮಾಡಿಕೊಂಡು ಪವಿತ್ರ ಕೊಡವಲ್ಯಾಂಡ್ ನ್ನು ಮೋಜು, ಮಸ್ತಿಗಾಗಿ ಬಿಟ್ಟುಕೊಡುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಹಸಿರ ಬೆಟ್ಟಗುಡ್ಡಗಳನ್ನು ಕಡಿದು ಜಲನಾಳಗಳನ್ನು ನಾಶಪಡಿಸುವುದೇ ಎನ್ನುವುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗೆ ಕೇವಲ ಹಣವಷ್ಟೇ ಬೇಕಾಗಿದೆ. ಮಾಫಿಯಾಗಳು ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕೇಂದ್ರಗಳು ಮತ್ತು ಕ್ರೀಡೋತ್ಸವಗಳಿಗೆ ದೇಣಿಗೆ ನೀಡಿ ಜನರ ಗಮನವನ್ನು ಬೇರೆಡೆಗೆ ಸೆಳೆದು ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ಪರಿಸರದ ಮೇಲೆ ದಾಳಿ ಮಾಡಿ ಅನಾರೋಗ್ಯಕರ ಪರಿಸ್ಥಿತಿಯನ್ನು ಸೃಷ್ಟಿಸಿ, ತಮ್ಮ ತಪ್ಪನ್ನು ಮುಚ್ಚಿ ಹಾಕಲು ವೈದ್ಯಕೀಯ ಸೇವೆ ನೀಡಿದಂತೆ ಮಾಡಿ ಸಾಮಾಜಿಕ ಕಳಕಳಿಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೆಲವು ರಾಜಕಾರಣಿಗಳು ಮತಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡುತ್ತಿದ್ದಾರೆ. ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಗಳನ್ನು ಮಾಡಿಕೊಡುತ್ತಿದ್ದಾರೆ. ಅಲ್ಲದೆ ಶೋಷಿತರು ಎನ್ನುವ ಹಣೆಪಟ್ಟಿ ಕಟ್ಟಿ ಬಿರುನಾಣಿ ಮತ್ತು ಹೈಸೊಡ್ಲೂರು ಭಾಗದಲ್ಲಿ ಅಕ್ರಮ ಸಕ್ರಮದಡಿ ನೆಲೆ ಕಲ್ಪಿಸಲು ಹೊಂಚು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ ಎಂದು ಆರೋಪಿಸಿದರು. ಕೊಡವರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಇದೆಲ್ಲವನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಹಸಿರ ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯ ಮತ್ತು ವಿಶ್ವ ಪಾರಂಪರಿಕ ತಾಣ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಕುಟ್ಟ ಅತಿ ಎತ್ತರದ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು, ವಿಶ್ವ ಪಾರಂಪರಿಕ ತಾಣವಾಗಿದೆ. ಆದರೆ ಸರಕಾರದ ಕಾನೂನು ಕೊಡವರಿಗೆ ಮಾತ್ರ ಅನ್ವಯವಾಗುತ್ತಿದ್ದು, ಬಂಡವಾಳಶಾಹಿಗಳು ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷದಿಂದ ಯಾವುದೇ ಸೂಕ್ಷ್ಮ ಪರಿಸರ ವಲಯದ ಕಾನೂನಿಗೆ ಒಳಪಡುತ್ತಿಲ್ಲ. ಕೊಡವರು ಮಾತ್ರ ಎಲ್ಲಾ ಕಾನೂನುಗಳಿಗೆ ಒಳಪಟ್ಟು ಆಡಳಿತ ವ್ಯವಸ್ಥೆಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‍ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‍ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.
::: ವಿವಿಧೆಡೆ ಜನಜಾಗೃತಿ ::: ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಮುಂದಿನ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸುವುದಾಗಿ ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಮುದ್ದಿಯಡ ಲೀಲಾವತಿ, ಮಂಡೇಪಂಡ ಲಾಲಾ ಮಾಚಯ್ಯ, ಕುಂಞ0ಡ ನಿರು ನಾಣಯ್ಯ, ನೆಲ್ಲಮಕ್ಕಡ ವಿವೇಕ್, ಪಟ್ಟಡ ಅರುಣ್, ಕೆ.ಎಸ್.ತಿಮ್ಮಯ್ಯ, ಎಂ.ಸಿ.ಅಯ್ಯಪ್ಪ, ಪಿ.ಪಿ.ಪೂವಯ್ಯ, ನೆಲ್ಲಮಕ್ಕಡ ಸಾಗರ್, ಎಂ.ಎಂ.ದೇವಯ್ಯ, ಪಿ.ಗಗನ್ ಗಣಪತಿ, ಬಿ.ಎ.ಮಂದಣ್ಣ, ಕೆ.ಟಿ.ಮನು, ಎಂ.ಪಿ.ರಾಜೀವ್, ಕೆ.ಎ.ಅಯ್ಯಪ್ಪ, ನೆಲ್ಲಮಕ್ಕಡ ಬೊಳ್ಯಪ್ಪ, ನೆಲ್ಲಮಕಡ ಸುಬ್ರಮಣಿ, ನೆಲ್ಲಮಕ್ಕಡ ಪೆಮ್ಮಯ್ಯ, ನೆಲ್ಲಮಕ್ಕಡ ಮಾಚಯ್ಯ, ಐನಂಡ ಪ್ರಕಾಶ್, ಐನಂಡ ಮೊಣ್ಣಪ್ಪ, ನೆಲ್ಲಮಕ್ಕಡ ಗಣಪತಿ, ನಾಯಡ ಪವಿ ಪೂವಯ್ಯ, ಸಿ.ಯು.ಗಣೇಶ್, ಎಂ.ಎಂ.ತಮ್ಮಯ್ಯ, ಪುದಿಯೊಕ್ಕಡ ಬೋಪಣ್ಣ, ಮಚ್ಚರಂಡ ಗಣೇಶ್, ಪುಗ್ಗೇರ ರಾಜೇಶ್, ಮಚ್ಚರಂಡ ಬೋಪಣ್ಣ, ಮಾಚಿಮಂಡ ಸುರೇಶ್ ಅಯ್ಯಪ್ಪ, ಕೊಳೇರ ರನ್ನ, ಮಚ್ಚರಂಡ ಸುಬ್ಬಯ್ಯ, ಮುದ್ದಿಯಡ ಮಾದಪ್ಪ, ಅಚ್ಚಿಯಂಡ ಮುತ್ತಪ್ಪ, ಮಚ್ಚರಂಡ ಪೆಮ್ಮಯ್ಯ, ಎಂ.ಎಂ.ಮಾಚಯ್ಯ, ಕೆ.ಕೆ.ನಾಚಪ್ಪ, ಕೆ.ಬಿ.ಗಣಪತಿ, ಪಿ.ಬಿ.ಚೆಂಗಪ್ಪ, ಪಟ್ಟಡ ದೇವು ಉತ್ತಯ್ಯ, ಕೆ.ಬಿ.ನಾಣಯ್ಯ, ಚೋವಂಡ ಅಭಿನ್ ಮಂದಣ್ಣ, ಕೆ.ಪಿ.ಕುಂಞಪ್ಪ, ಕಿರಿಯಮಡ ಶರೀನ್, ನೆಲ್ಲಮಕ್ಕಡ ಧರಣು, ಮಂಡೇಪಂಡ ಚಂಗಪ್ಪ, ಮಂಡೇಪಂಡ ನಂಜಪ್ಪ, ನೆಲ್ಲಮಕ್ಕಡ ಅಯ್ಯಪ್ಪ, ಐನಂಡ ಮಾಚಯ್ಯ, ಮಾಚಿಮಡ ಚಿಣ್ಣಪ್ಪ, ಕಾವಡಿಚಂಡ ಕುಟ್ಟಪ್ಪ, ಸಿ.ಎನ್.ಅಪ್ಪಣ್ಣ, ಉದ್ದಪಂಡ ಐಯಣ್ಣ, ಕೆ.ಪಿ.ಮುದ್ದಯ್ಯ, ಐನಂಡ ಲಾಲ, ಚಂಬಂಡ ಜನತ್ ಪಾಲ್ಗೊಂಡು ಸಿಎನ್‍ಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.