ಮಡಿಕೇರಿ ಅ.10 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಸಂಯುಕ್ತ ಆಶ್ರಯದಲ್ಲಿ ಕರಿಕೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಸಾಮಾನ್ಯ ವೈದ್ಯಶಾಸ್ತ್ರ, ಶಸ್ತ್ರ ಚಿಕಿತ್ಸೆ, ನೇತ್ರ ವಿಭಾಗ, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವ್ಯೆದ್ಯಕೀಯ, ದಂತ, ಮಾನಸಿಕ ರೋಗ, ಅಸಾಂಕ್ರಾಮಿಕ ರೋಗಗಳ ನುರಿತ ತಜ್ಞ ವ್ಯೆದ್ಯರು ವೈದ್ಯಕೀಯ ಸೇವೆಯನ್ನು ನೀಡಿದರು. ಸುಮಾರು 180 ಕ್ಕಿಂತ ಹೆಚ್ಚು ಹೊರ ರೋಗಿಗಳ ವ್ಯೆದ್ಯರ ಭೇಟಿ, 16 ಯುಡಿಐಡಿ ಕಾರ್ಡ್ ಗಳು, 100 ಕ್ಕಿಂತ ಹೆಚ್ಚಿನ ಜನರು ಅಸಾಂಕ್ರಾಮಿಕ ರೋಗಗಳ ಪರೀಕ್ಷೆಯನ್ನು ಪಡೆದುಕೊಂಡರು ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ವ್ಯೆದ್ಯಕೀಯ ಕಾಲೇಜು ಮಡಿಕೇರಿಗೆ ರೆಫರ್ ಮಾಡಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಉದ್ಘಾಟಿಸಿ, ಶಿಬಿರಗಳನ್ನು ಆಯೋಜನೆ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಗುರಿ ಎಂದ ಅವರು, ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಉಚಿತ ಆಯುಷ್ಮಾನ್ ಕಾರ್ಡ್‍ಗಳ ನೋಂದಣಿ, ಉಚಿತ ಯುಡಿಐಡಿ ನೋಂದಣಿ, ದೇಹದಾನ, ನೇತ್ರದಾನ, ಅಂಗಾಂಗ ದಾನ ಕುರಿತು ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ.ಸತೀಶ್ ಹಾಗೂ ತಂಡ, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಲಚಂದ್ರ ನಾಯರ್, ವೈದ್ಯಕೀಯ ಕಾಲೇಜಿನ ಡಾ.ನರಸಿಂಹ.ಬಿ.ಸಿ. ಕರಿಕೆ, ವೈದ್ಯಾಧಿಕಾರಿ ಡಾ.ಪುಂಡಲಿಕ್, ವೈದ್ಯಕೀಯ ಕಾಲೇಜಿನ ವೈದ್ಯರು ಉಪಸ್ಥಿತರಿದ್ದರು.