ಮಡಿಕೇರಿ ಅ.10 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಶು ಅಭಿವೃದ್ದಿ ಯೋಜನಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಿಷನ್ ಶಕ್ತಿ ಯೋಜನೆಯ-ಬೇಟಿ ಬಚಾವೊ-ಬೇಟಿ ಪಡಾವೊ ಯೋಜನೆಯಡಿ ‘ಅಂತರಾಷ್ರ್ಟೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ’ ‘ಹೆಣ್ಣು ಮಗುವಿನ ಪ್ರಾಮುಖ್ಯತೆಯ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ, ಮಕ್ಕಳ ತಾಯಂದಿಯರಿಗೆ ಹಾಗೂ ಕಿಶೋರಿಯರಿಗೆ ಅರಿವು ಕಾರ್ಯಕ್ರಮ ನಡೆಯಿತು. ಗುಡ್ಡೆಹೊಸೂರಿನ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಡ್ಡೆಹೊಸೂರು ಗ್ರಾ.ಪಂ.ಅಧ್ಯಕ್ಷರಾದ ಸೌಮ್ಯ, ಮಕ್ಕಳು ಪ್ರಸ್ತುತ ದಿನಗಳಲ್ಲಿ ಮೊಬೈಲ್ ಗೀಳಿಗೆ ತುತ್ತಾಗಿದ್ದು, ಓದಿನ ಕಡೆ ಹೆಚ್ಚು ಗಮನ ಹರಿಸದೇ ಇರುವುದು ಇಂದಿನ ದಿನಗಳಲ್ಲಿ ವಿಪರ್ಯಾಸವೇ ಸರಿ ಎಂದರು. ಹಾಡಿಗಳಂತಹ ವಾತವರಣದಲ್ಲಿ ಬೆಳೆಯುವ ಮಕ್ಕಳು ಹೆಚ್ಚಿನದ್ದಾಗಿ ಶಿಕ್ಷಣದ ಮಹತ್ವ ಅರಿಯಬೇಕಾಗಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಎಸ್.ಆರ್. ಕೇಶಿನಿ ಮಾತನಾಡಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕಾಲೇಜು ದಿನಗಳಲ್ಲಿ ಭಾವನಾತ್ಮಕವಾಗಿ, ಮಾನಸಿಕವಾಗಿ ಬದಲಾವಣೆ ಆಗುತ್ತವೆಯಾದರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಾಲೇಜಿನಲ್ಲಿ ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆದುಕೊಂಡಾಗ ಉತ್ತಮ ಸಮಾಜ ನಿರ್ಮಾಣಮಾಡಲು ಸಾಧ್ಯವಾಗುತ್ತದೆ. ಸಮಾಜದ ಆಗುಹೋಗುಗಳನ್ನು ಅರಿತುಕೊಂಡು ಉತ್ತಮ ಉದ್ಯೋಗ ಪಡೆದುಕೊಂಡಾಗ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಬಹುದು ಎಂದರು. ಮಾತೃವಂದನಾ ಸಂಯೋಜಕಿ ಎ.ನವ್ಯ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು ಗರ್ಭಿಣಿ, ಬಾಣಂತಿ ಮತ್ತು ಎರಡನೇ ಹೆಣ್ಣು ಮಗುವಿಗೆ ಆರೋಗ್ಯ ಮಟ್ಟ ಸುಧಾರಿಸಲು ಅಗತ್ಯ ದಾಖಲಾತಿ ಹೊಂದಿದ ಫಲಾನುಭವಿಗಳಿಗೆ ಸರ್ಕಾರದಿಂದ ನೇರನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಅತ್ತೂರು ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಮಕ್ಕಳ ತಾಯಂದಿರು, ಕಿಶೋರಿಯರು ಹಾಜರಿದ್ದರು. ಮಹಿಳಾ ಸಬಲೀಕರಣ ಘಟಕದ ಕೆ.ಎ.ನಳಿನಿ ನಿರೂಪಿಸಿದರು.