ಹುಣಸೂರು NEWS DESK ಅ.16 : ಕ್ಷೇತ್ರದ ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭರವಸೆ ನೀಡಿದ್ದಾರೆ. ಹುಣುಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ ಅವರು ಹೊಗೆಸೊಪ್ಪು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಸಂಸದರು ಮೂಲಭೂತ ಸೌಲಭ್ಯ ಒದಗಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ತಿಳಿಸಲಾಗುವುದು ಎಂದರು. ಬೆoಗಳೂರಿನಲ್ಲಿರುವ ನಿರ್ದೇಶಕರ ಕಚೇರಿಯನ್ನು ಮೈಸೂರಿಗೆ, ಮೈಸೂರಿನಲ್ಲಿರುವ ಆರ್.ಎಂ.ಒ ಕಚೇರಿಯನ್ನು ಹುಣಸೂರು ಉಪ ವಿಭಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಅಧಿಕಾರಿಗಳು ರೈತರ ನೆರವಿಗೆ ನಿಲ್ಲಬೇಕು, ಬೆಲೆ ಏರಳಿತವಾಗದಂತೆ ನೋಡಿಕೊಳ್ಳಬೇಕು. ರೈತರ ಹಿತ ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಯದುವೀರ್ ಭರವಸೆ ನೀಡಿದರು. ಈ ಸಂದರ್ಭ ಮಾಜಿ ಶಾಸಕ ಬಸವರಾಜು, ತಂಬಾಕು ಮಂಡಳಿಯ ಸದಸ್ಯ ಹಬ್ಬನಕುಪ್ಪೆ ದಿನೇಶ್, ವಿಕ್ರಂರಾಜೇ ಅರಸು, ಜಿ.ಪಂ ಮಾಜಿಸದಸ್ಯ ನಾಗರಾಜ್ ಮಲ್ಲಾಡಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರ್ ಕುಮಾರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ರಾಮೇಗೌಡ ಮತ್ತಿತರರು ಹಾಜರಿದ್ದರು.