ಮಡಿಕೇರಿ ಅ.16 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ `ಗಡಿನಾಡ ಅರೆಭಾಷೆ ಉತ್ಸವ’ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆಭಾಷೆ ಸಂಸ್ಕೃತಿ, ಸಂಪ್ರದಾಯಗಳ ಮಹತ್ವ ಸಾರುವ ನಿಟ್ಟಿನಲ್ಲಿ ದ.ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ `ಗಡಿ ಉತ್ಸವ’ ಏರ್ಪಡಿಸಲು ನಿರ್ಧರಿಸಲಾಗಿದೆ. ಅ.27ರಂದು ದ.ಕನ್ನಡ ಜಿಲ್ಲೆಯ ಬಂದಡ್ಕದಲ್ಲಿ ಪ್ರಥಮ ಗಡಿ ಉತ್ಸವ ನಡೆಯಲಿದೆ. ಎರಡನೇ ಕಾರ್ಯಕ್ರಮವು ನ.10ರಂದು ಕೊಡಗಿನ ಚೆಯ್ಯಂಡಾಣೆಯಲ್ಲಿ ಹಾಗೂ 3ನೇ ಕಾರ್ಯಕ್ರಮವು ಮಾಜಿ ಸಿಎಂ ಸದಾನಂದ ಗೌಡರ ತವರೂರಾದ ದ.ಕನ್ನಡ ಜಿಲ್ಲೆಯ ಮಂಡೆಕೋಲಿಯಲ್ಲಿ ಡಿ.1 ರಂದು ನಡೆಯಲಿದೆ. ಅಲ್ಲದೇ ಕೊಡಗಿನ ಭಾಗಮಂಡಲ, ಕುಶಾಲನಗರ ಹಾಗೂ ದ.ಕನ್ನಡದ ಕಲ್ಲಪಳ್ಳಿ ಭಾಗದಲ್ಲಿ ಗಡಿ ಉತ್ಸವ ನಡೆಸುವ ಬಗ್ಗೆ ರೂಪುರೇಷೆ ಸಿದ್ದಪಡಿಸಲಾಗಿದೆ ಎಂದು ಹೇಳಿದರು. ಗಡಿನಾಡಿನಲ್ಲಿ ಅರೆಭಾಷಿಕರ ಹಾಗೂ ಅರೆಭಾಷೆಯ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ಸವಕ್ಕೆ ಈಗಾಗಲೇ ತಯಾರಿ ನಡೆದಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೇ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಗಿದೆ ಎಂದರು. ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣೆ ಕಾರ್ಯಕ್ರಮವು ಅ.31 ರಂದು ಮಡಿಕೇರಿಯಲ್ಲಿ ನಡೆಯಲಿದೆ. ಅರೆಭಾಷೆ ತ್ರೈಮಾಸಿಕ ಪತ್ರಿಕೆ ಹಿಂಗಾರ, ಪ್ರಕಟಗೊಳ್ಳದೆ ಉಳಿದಿರುವ 6 ಸಂಚಿಕೆಗಳ ಮುದ್ರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಪುಸ್ತಕ ಪ್ರಕಟಣೆ, ಸಂಶೋಧನಾ ಗ್ರಂಥಗಳ ಮುದ್ರಣ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಅಕಾಡೆಮಿಯಿಂದ ಸದ್ಯದಲ್ಲೇ 2022-23ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಸದಾನಂದ ಮಾವಜಿ ಮಾಹಿತಿ ನೀಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತು ಸಾಹಿತ್ಯ ಅಕಾಡೆಮಿಗೆ ಸರ್ಕಾರವು ಈಗಾಗಲೇ ಅಧ್ಯಕ್ಷರು ಸೇರಿದಂತೆ ಹನ್ನೊಂದು ಮಂದಿಯನ್ನು ನೇಮಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರೆಭಾಷಿಕರು ಇರುವ ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸಹ-ಸದಸ್ಯರ ಆಯ್ಕೆ ಮೂಲಕ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಒದಗಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲು, ಬಡ್ಡಡ್ಕ ಚಂದ್ರಾವತಿ, ವಿನೋದ್ ಮೂಡಗದ್ದೆ, ಪೂಳಕಂಡ ಸಂದೀಪ್ ಉಪಸ್ಥಿತರಿದ್ದರು.