ನಾಪೋಕ್ಲು ಅ.17 NEWS DESK : ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಬೆಳೆಗಾರರು ಮತ್ತು ಕಾರ್ಮಿಕರ ನಡುವಿನ ಬಾಂಧವ್ಯ ಉತ್ತಮವಾಗಿದೆ ಎಂದು ನಾಪೋಕ್ಲು ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸಾಯ ಬ್ಯಾಂಕಿನ ನಿರ್ದೇಶಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಹೇಳಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಪೋಕ್ಲುವಿನ ಸುಭಾಷ್ ನಗರ ಕಾರ್ಯಕ್ಷೇತ್ರದ ಪರಮೇಶ್ವರಿ ಜ್ಞಾನವಿಕಾಸ ಸಂಘದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೃಷಿಯಿಂದಾಗಿ ಬೆಳೆಗಾರರು ಮತ್ತು ಕಾರ್ಮಿಕರು ಉತ್ತಮವಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸದಸ್ಯರಿಗೆ ಕೃಷಿ ಉತ್ಪನ್ನಗಳ ಬಗ್ಗೆ ಉತ್ತಮವಾದ ಮಾಹಿತಿ ನೀಡಿ ಮಧ್ಯವರ್ಜನಾ ಶಿಬಿರದಿಂದ ಕಾರ್ಮಿಕರು ಕುಡಿತವನ್ನು ತ್ಯಜಿಸಿದ್ದು ಯೋಜನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಾಜಿದ ವಹಿಸಿದ್ದು, ಸಂಘದ ಸಮನ್ವಯಾಧಿಕಾರಿ ಮಾಲಿನಿ ಸದಸ್ಯರಿಗೆ ಸಂಘದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಭೆಯಲ್ಲಿ ಸೇವಾಪ್ರತಿನಿಧಿ ಉಮಾಲಕ್ಷ್ಮಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.