ಮಡಿಕೇರಿ ಅ.17 NEWS DESK : ಜಿಲ್ಲಾ ಹಾಪ್‍ಕಾಮ್ಸ್ 4ನೇ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ನೂತನವಾಗಿ ಆರಂಭಿಸಿರುವ ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಹಾಪ್‍ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಉದ್ಘಾಟಿಸಿದರು. ನಗರದ ಅಂಚೆಕಚೇರಿ ಎದುರಿನ ಹಾಪ್‍ಕಾಮ್ಸ್ ಕಟ್ಟಡದಲ್ಲಿ ಜಿಲ್ಲೆಯ ಸಾವಯವ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಳಿಗೆ ಆರಂಭಿಸಲಾಗಿದ್ದು, ಕೈಗೆಟಕುವ ದರದಲ್ಲಿ ಉತ್ಪನ್ನ ದೊರೆಯುವುದರೊಂದಿಗೆ ಸ್ಥಳೀಯ ರೈತರಿಗೆ ಮಾರುಕಟ್ಟೆಯೂ ತೆರೆದುಕೊಂಡಂತಾಗಿದೆ. ಸಾವಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ರೂಪಿಸಿರುವುದರಿಂದ ಸಾವಯವ ಬೆಳೆಗಳು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ರಮೇಶ್ ಚಂಗಪ್ಪ ಹೇಳಿದರು. ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ, ಮಡಿಕೇರಿ ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೊಟ್ಟೋಳಂಡ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿ ಬೆಳೆಯುವ ತರಕಾರಿ, ಹಣ್ಣು-ಹಂಪಲು ಸೇರಿದಂತೆ ಕೆಲವೊಂದು ಸಾವಯವ ಆಹಾರ ಉತ್ಪನ್ನಗಳನ್ನು ಪ್ರಥಮ ಹಂತದಲ್ಲಿ ಮಾರಾಟಕ್ಕೆ ನೀಡಲಾಗಿದೆ ಎಂದರು. ಸಾವಯವ ಕೃಷಿಕ ಪೊನ್ನಪ್ಪ ಮಾತನಾಡಿ, ಕಳೆದ 3 ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿದ್ದ, ಇದಕ್ಕೆ ಪೂರಕವಾಗಿ ಹಾಪ್‍ಕಾಮ್ಸ್ ಮಾರುಕಟ್ಟೆ ಒದಗಿಸಿ ಸಹಾಯ ಮಾಡಿದೆ ಎಂದು ಹೇಳಿದರು. ಈ ಸಂದರ್ಭ ಹಾಪ್‍ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ನಿರ್ದೇಶಕರುಗಳಾದ ಎಸ್.ಪಿ.ಪೊನ್ನಪ್ಪ, ನಾಗೇಶ್ ಕುಂದಲ್ಪಾಡಿ, ಚೊಟ್ಟೆಯಂಡಮಾಡ ಲೀಲಾ ಮೇದಪ್ಪ, ಕೋಣೇರಿರ ಮನೋಹರ್, ಪಾಡಿಯಮ್ಮಂಡ ಮನು ಮಹೇಶ್, ಕಾಂಗೀರ ಸತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಷ್ಮ ಗಿರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.