ಕುಶಾಲನಗರ ಅ.18 NEWS DESK : ಆದಿಕವಿ ಮಹರ್ಷಿ ವಾಲ್ಮೀಕಿಯವರು ಮಾನವೀಯತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮೊದಲಾದ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯಿಸಿದರು. ಚಿಕ್ಕ ಅಳುವಾರ ಜ್ಞಾನ ಕಾವೇರಿ ಕ್ಯಾಂಪಸ್ ನಲ್ಲಿ ನಡೆದ ವಾಲ್ಮೀಕಿ ಜಯಂತಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯದಲ್ಲಿ ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ನೀಡಿರುವ ಆದರ್ಶ ಮೌಲ್ಯಗಳನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷವು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗುರು ಹಿರಿಯರನ್ನು ಗೌರವಿಸುವ ಜೀವನದ ಮೌಲ್ಯಗಳು, ಮಾತೃತ್ವ, ತ್ಯಾಗ ಮನೋಭಾವ, ದೇಶಕ್ಕಾಗಿ ಸೇವೆ, ಪ್ರಕೃತಿ ಸೇವೆ ಮೊದಲಾದ ಸಾಮಾಜಿಕ ವಿಚಾರಗಳನ್ನು ಸಾರಿದ್ದಾರೆ. ಈ ನಿಟ್ಟಿನಲ್ಲಿ ಕೇವಲ ಆಚರಣೆಗೆ ಸೀಮಿತವಾಗಿರದೆ ಮಹರ್ಷಿ ವಾಲ್ಮೀಕಿಯವರ ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡ ನಡೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಯುಯುಸಿಎಂಎಸ್ ನೋಡಲ್ ಅಧಿಕಾರಿ ಹೆಚ್.ಎಸ್.ಗಗನ್ , ಉಪನ್ಯಾಸಕರಾದ ಎನ್.ಕೆ.ಸುದರ್ಶನ್ ಕುಮಾರ್ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ.ಕೆ.ದೀಪ್ತಿ ಪ್ರಾರ್ಥಿಸಿದರು, ಉಪನ್ಯಾಸಕ ಡಾ.ಜ಼ಮೀರ್ ಅಹಮದ್ ಸ್ವಾಗತಿಸಿದರು. ಕೆ.ಬಿ.ದೀಪ್ತಿ ನಿರೂಪಿಸಿದರು.