ಮಡಿಕೇರಿ ಅ.18 NEWS DESK : ಜೀವನದಿ ಕಾವೇರಿಯ ತೀರ್ಥೋದ್ಭವದ ಹಿನ್ನೆಲೆಯಲ್ಲಿ ನಗರದ ಶ್ರೀ ಕಾವೇರಿ ಭಕ್ತ ಮಂಡಳಿಯಿಂದ ಇಂದು (ಅ.18) ನಗರ ವ್ಯಾಪ್ತಿಯಲ್ಲಿ 70ನೇ ವರ್ಷದ ಶ್ರೀ ಕಾವೇರಿಯ ಮಂಟಪದೊಂದಿಗೆ ಭಕ್ತಾದಿಗಳಿಗೆ ತೀರ್ಥ ವಿತರಣೆ ಮಾಡಲಾಯಿತು. ಶ್ರೀ ಕಾವೇರಿ ಭಕ್ತ ಮಂಡಳಿಯ ಪದಾಧಿಕಾರಿಗಳು ತೀರ್ಥೋದ್ಭವದ ದಿನವಾದ ಗುರುವಾರ ತಲಕಾವೇರಿಗೆ ತೆರಳಿ ಪವಿತ್ರ ಕಾವೇರಿ ತೀರ್ಥವನ್ನು ಸಂಗ್ರಹಿಸಿ, ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯಲ್ಲಿನ ಶ್ರೀ ಕಾವೇರಿ ಭಕ್ತ ಮಂಡಳಿಗೆ ಅದನ್ನು ತಂದರು, ಇಂದು ಬೆಳಗ್ಗೆ ವಿಧ್ಯುಕ್ತ್ತವಾಗಿ ತೀರ್ಥಪೂಜೆಯನ್ನು ನೆರವೇರಿಸಲಾಯಿತು. ಕಾವೇರಿ ತೀರ್ಥ ಪೂಜೆ ಹಿನ್ನೆಲೆ ಇಂದು ಬೆಳಗ್ಗೆ ಗಣಪತಿ ಹೋಮ, ಕಳಸ ಕಟ್ಟುವ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ವಿತರಿಸಿದ ಬಳಿಕ ಕಾವೇರಿ ಮಾತೆಯ ಮೂರ್ತಿಯನ್ನು ಹೊಂದಿದ ಆಕರ್ಷಕ ಮಂಟಪದಲ್ಲಿ ಮಂಗಳ ವಾದ್ಯಗಳ ಸಹಿತ ನಗರದ ವಿವಿಧ ಬಡಾವಣೆಗಳಿಗೆ ಮೆರವಣಿಗೆ ತೆರಳಿ ಭಕ್ತರಿಗೆ ಕಾವೇರಿ ತೀರ್ಥವನ್ನು ವಿತರಿಸಲಾಯಿತು. ಶ್ರೀ ಕಾವೇರಿ ತೀರ್ಥ ವಿತರಣಾ ಪುಣ್ಯ ಕಾರ್ಯವನ್ನು ಕಲಾವಿದ ದಿವಂಗತ ಅಣ್ಣು ಅವರು ಆರಂಭಿಸಿ ಇಂದಿಗೆ ಎಪ್ಪತ್ತು ವರ್ಷಗಳು ಸಂದಿದೆ. ಪ್ರಸ್ತುತ ಅಣ್ಣು ಅವರ ಮಕ್ಕಳಾದ ರವಿ ಮತ್ತು ಜಾಜಿ ಹಾಗೂ ಶ್ರೀ ಕಾವೇರಿ ಭಕ್ತ ಮಂಡಳಿಯ ಪದಾಧಿಕಾರಿಗಳು ಕಾವೇರಿ ತೀರ್ಥ ವಿತರಣಾ ಕಾರ್ಯವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಕಾವೇರಿ ಮಂಟಪ ಜಿಲ್ಲಾ ಕ್ರೀಡಾಂಗಣ ಮಾರ್ಗವಾಗಿ, ಶ್ರೀ ಓಂಕಾರೇಶ್ವರ ಮುಖ್ಯ ರಸ್ತೆ, ಗೌಳಿ ಬೀದಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ತೆರಳಿತು. ಈ ಸಂದರ್ಭ ಭಕ್ತಾದಿಗಳಿಗೆ ಪವಿತ್ರ ಕಾವೇರಿ ತೀರ್ಥವನ್ನು ವಿತರಿಸಲಾಯಿತು.