ಮಡಿಕೇರಿ ಅ.19 NEWS DESK : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದಿಂದ ನ.24 ರಂದು ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಕೊಟ್ಟು ಕತ್ತೀರ ಪಿ. ಸೋಮಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಸಾಲಿನ ಕ್ರೀಡಾಕೂಟದಲ್ಲಿ ಮಾಜಿ ಸೈನಿಕರುಗಳಿಗೆ, ವೀರ ನಾರಿಯರಿಗೆ, ವಿಧವೆಯರಿಗೆ, ಅವಲಂಬಿತರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಬಾರಿ ಕ್ರೀಡಾ ಕೂಟದಲ್ಲಿ ಅರೆ ಸೇನಾ ಪಡೆಗಳ ಮಾಜಿ ಯೋಧರು ಮತ್ತು ಅವರ ಕುಟುಂಬಸ್ಥರಿಗೂ ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಮಾಹಿತಿಯನ್ನಿತ್ತರು. ಕ್ರೀಡಾಕೂಟಕ್ಕೆ ಬೆಳಗ್ಗೆ 9 ಗಂಟೆಗೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಕ್ರೀಡಾಜ್ಯೋತಿಯನ್ನು ಬೆಳಗಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನದವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನದ ಬಳಿಕ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.ಕ್ರೀಡಾಕೂಟ ನಡೆಯುವ ಸಂದರ್ಭದಲ್ಲೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿದೆ. ಇಸಿಜಿ ಪರೀಕ್ಷಾ ಸೌಲಭ್ಯವೂ ಇದರಲ್ಲಿ ಸೇರಿದೆ. ಎಲ್ಲಾ ಮಾಜಿ ಸೈನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮಾಜಿ ಸೈನಿಕರ ಕ್ರೀಡಾಕೂಟಕ್ಕೆ ಜಿಲ್ಲೆಯ ಎಲ್ಲಾ ಶಾಸಕರು, ಉಸ್ತುವಾರಿ ಸಚಿವರುಗಳನ್ನು ಆಹ್ವಾನಿಸಲಾಗುತ್ತಿದೆ. ಸಮಾರೋಪ ಸಮಾರಂಭಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಆಹ್ವಾನಿಸಿ, ಅವರಿಂದ ಬಹುಮಾನ ವಿತರಣೆ ಮಾಡಬೇಕೆಂದು ಉದ್ದೇಶಿಸಲಾಗಿದೆಯೆಂದು ಕೊಟ್ಟುಕತ್ತೀರ ಸೋಮಣ್ಣ ತಿಳಿಸಿದರು.
ನಾವೆಲ್ಲರು ಒಂದೇ :: ಭಾರತೀಯ ಸೈನ್ಯದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಎಲ್ಲರೂ ಒಂದೇ. ಈ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಜಿಲ್ಲೆಯ ಎಲ್ಲಾ ಮಾಜಿ ಯೋಧರ ಸಂಘಟನೆಗಳಿಗೆ ಆಹ್ವಾನವನ್ನು ನೀಡಲಾಗಿದೆ. ಎಲ್ಲಾ ಮಾಜಿ ಯೋಧರು, ಅರೆ ಸೇನಾ ಪಡೆಯ ಯೋಧರು ಮತ್ತು ಅವರ ಕುಟುಂಬಸ್ಥರು ಪಾಲ್ಗೊಳ್ಳುವಂತೆ ಕೋರಿದರು. ಎಸ್‍ಬಿಐ ಸೇರಿದಂತೆ ವಿವಿಧ ಸಂಸ್ಥೆಗಳು ಕ್ರೀಡಾಕೂಟದ ಸಂದರ್ಭ, ಮಾಜಿ ಸೈನಿಕರಿಗೆ ಸಂಬಂಧಿಸಿದಂತೆ, ಅವುಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನ ನಡೆಸಲಿವೆ. ಜಿಲ್ಲೆಯ ಬಹುತೇಕ ಮಾಜಿ ಯೋಧರ ಪಿಂಚಣಿ ಎಸ್‍ಬಿಐ ಮೂಲಕ ಬರುತ್ತದೆ.ಈ ಹಿನ್ನೆಲೆ ಪಿಂಚಣಿ ಕುರಿತ ಸಮಸ್ಯೆಗಳಿದ್ದಲ್ಲಿ ಎಸ್‍ಬಿಐ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಲು ಅವಕಾಶವಿದೆಯೆಂದು ತಿಳಿಸಿದರು.
30 ವಿವಿಧ ಸ್ಪರ್ಧೆಗಳು :: ಮಾಜಿ ಸೈನಿಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಕ್ರೀಡಾಕೂಟದ ಸಂಚಾಲಕ ಕುಟ್ಟಂಡ ಲವ ಪೊನ್ನಪ್ಪ ಮಾತನಾಡಿ, ಕ್ರೀಡಾಕೂಟದಲ್ಲಿ 30 ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಗ್ಗಜಗ್ಗಾಟ, ರಿಲೇ ಮೊದಲಾದ ಗುಂಪು ಸ್ಪರ್ಧೆಗಳು ತಾಲ್ಲೂಕು ತಂಡಗಳ ನಡುವೆ ನಡೆಯಲಿದೆ. ಉಳಿದಂತೆ ಇತರೆ ಸ್ಪರ್ಧೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬಹುದೆಂದು ತಿಳಿಸಿದರು. ಸೈನ್ಯ ಸೇರ್ಪಡೆಗೆ ಅನುಕೂಲವಾಗುವಂತೆ 800 ಮೀ.ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ್ಳುವ ಮೂಲಕ ಸೈನ್ಯ ಸೇರ್ಪಡೆಯ ತಮ್ಮ ಸಾಮಥ್ರ್ಯವನ್ನು ಕಂಡುಕೊಳ್ಳಬಹುದೆಂದು ಅಭಿಪ್ರಾಯಿಸಿದರು. ಮಾಜಿ ಯೋಧರ ಸಂಘ ಅರೆ ಸೇನಾಪಡೆಯ ಸಂಚಾಲಕರಾದ ನೂರೇರ ಭೀಮಯ್ಯ ಮಾತನಾಡಿ, ಇಲ್ಲಿಯವರೆಗೆ ಇಂತಹ ಯಾವುದೇ ಕ್ರೀಡಾಕೂಟಗಳಿಗೆ ಅರೆಸೇನಾಪಡೆಯ ನಿವೃತ್ತ ಯೋಧರನ್ನು ಯಾವುದೇ ಸಂಘಟನೆಗಳು ಆಹ್ವಾನಿಸಿರಲಿಲ್ಲ. ಇದೇ ಮೊದಲ ಬಾರಿಗೆ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಘಟಕ ತಮ್ಮನ್ನು ಆಹ್ವಾನಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ರೀಡಾಕೂಟದ ಯಶಸ್ಸಿಗೆ ಪೂರ್ಣ ಸಹಕಾರ ನಿಡುವುದಾಗಿ ಸ್ಪಷ್ಟಪಡಿಸಿದರು. ಅಂತರಾಷ್ಟ್ರೀಯ ಮಟ್ಟದ ಅಥ್ಲಿಟ್, ಮಾಜಿ ಯೋಧರು ಹಾಗೂ ಕ್ರೀಡಾ ಸಂಚಾಲಕರಾದ ಹೊಸೊಕ್ಲು ಚಿಣ್ಣಪ್ಪ ಮಾತನಾಡಿ, ಸಂಘದ ಮೂಲಕ ಸೈನ್ಯ ಸೇರ್ಪಡೆ ಬಯಸುವ ಮಕ್ಕಳಿಗೆ ತರಬೇತಿ, ಮಾಜಿ ಯೋಧರ ಸಂಕಷ್ಟಗಳ ಪರಿಹಾರಕ್ಕೆ ಸಂಘದ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬರಲಾಗುತ್ತಿದೆ ಎಂದರು. ಅಂತರಾಷ್ಟ್ರೀಯ ಕ್ರೀಡಾಪಟು ಮುಲ್ಲೇರ ಪೊನ್ನಮ್ಮ ಮಾತನಾಡಿ, ಸಂಘದಿಂದ ಮಾಜಿ ಸೈನಿಕರಿಗೆ ಸಾಕಷ್ಟು ಅನುಕೂಲವಾಗಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಚೋವಂಡ ತಿಮ್ಮಯ್ಯ ಉಪಸ್ಥಿತರಿದ್ದರು.