ಮಡಿಕೇರಿ ಅ.24 NEWS DESK : ಬಾಳೆಯಡ ಚರ್ಮಣ ರಾಜು ಹಾಗೂ ಮಾಚಮ್ಮ ಪಾಚಿ (ತಾಮನೆ ಮಾಚೆಟ್ಟಿರ) ದಂಪತಿಯರ ಪುತ್ರನಾಗಿ ಕರುಣ್ ಕಾಳಪ್ಪನವರು ಸೋಮವಾರಪೇಟೆಯಲ್ಲಿ ಜನಿಸಿದರು.
ಶಿಕ್ಷಣ :: ಕರುಣ್ ಅವರ ಪ್ರಾಥಮಿಕ ಶಿಕ್ಷಣ ಮಾದಪುರ ಹಾಗೂ ಕೊಡ್ಲಿಪೇಟೆ ಸರ್ಕಾರಿ ಶಾಲೆ ಹಾಗೂ ಮಡಿಕೇರಿಯ ಸೈಂಟ್ ಮೈಕಲ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ವಿರಾಜಪೇಟೆ ಸೈಂಟ್ ಅನ್ಸ್ ಶಾಲೆಯಲ್ಲಿ, ಸರ್ಕಾರಿ ಸೀನಿಯರ್ ಕಾಲೇಜು ಮಡಿಕೇರಿಯಲ್ಲಿ ಪಿ.ಯು.ಸಿ ಯ ಜೊತೆಗೆ ವಾಂಡರರ್ಸ್ ಗೆ ಸೇರಿ ಶಂಕರ್ ಸ್ವಾಮಿ ಅವರ ಶಿಷ್ಯರಾಗಿ ಮುಂದುವರಿಯುತ್ತಾರೆ. ಸೈಂಟ್ ಜೋಸೆಫ್ ಕಾಲೇಜು ಬೆಂಗಳೂರಿನಲ್ಲಿ ಬಿ.ಎ ಪದವಿಯನ್ನು ಪಡೆಯುತ್ತಾರೆ. ತದನಂತರ ಮಾರ್ಕೆಟಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆಯುತ್ತಾರೆ. ಎಂ.ಬಿ.ಎ ಯನ್ನು ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ ಮಾಡುತ್ತಾರೆ. ಇವರು ಕಾಲೇಜು ದಿನಗಳಲ್ಲಿ ಉತ್ತಮ ಓಟಗಾರರಾಗಿದ್ದರು.
1982 ರಲ್ಲಿ ಕ್ರೀಡಾ ಶಾಲೆ :: ಪದ್ಮಶ್ರೀ ಪುರಸ್ಕೃತ ಎಂ.ಪಿ.ಗಣೇಶ್ ಅವರ ಕನಸಿನಂತೆ ಲಕ್ನೋದಲ್ಲಿ ಕೆ.ಡಿ.ಸಿಂಗ್ ಬಾಬು ಅವರು ಸ್ಥಾಪಿಸಿದ ಕ್ರೀಡಾ ಶಾಲೆಯಂತೆಯೇ ಕರ್ನಾಟಕದಲ್ಲಿ ಸ್ಥಾಪಿಸಬೇಕು ಎಂದು ಅಂದಿನ ಮುಖ್ಯಮಂತ್ರಿ ಆದ ಆರ್.ಗುಂಡುರಾವ್ ಅವರಿಗೆ ಮನವಿ ಸಲ್ಲಿಸುತ್ತಾರೆ. ಅದರಂತೆ ಕರ್ನಾಟಕದಲ್ಲಿ ಕ್ರೀಡಾ ಶಾಲೆ ಸ್ಥಾಪನೆಯಾಗುತ್ತದೆ. ಅದಕ್ಕೆ ಪ್ರಥಮವಾಗಿ ಆಯ್ಕೆಯಾದವರಲ್ಲಿ ಕಾಳಪ್ಪನವರು ಒಬ್ಬರು. ಎಂ.ಪಿ.ಗಣೇಶ್, ಮೊಳ್ಳೆರ ಸುಬ್ಬಯ್ಯ ಹಾಗೂ ಚೇಂದಂಡ ಈರಪ್ಪ ಅವರ ತರಬೇತಿಯಲ್ಲಿ ಅತ್ಯುತ್ತಮ ತಂಡ ರೂಪಗೊಂಡಿತು. ಇದು ಕರ್ನಾಟಕದ ಎಲ್ಲಾ ತಂಡವನ್ನು ಪ್ರತಿ ಹಂತದಲ್ಲೂ ಸೋಲಿಸುವ ಬಲಿಷ್ಠ ಕ್ರೀಡಾ ಶಾಲೆ ಎಂದೇ ಖ್ಯಾತಿ ಪಡೆಯಿತು. ಅದ್ಭುತ ಹಾಕಿಯ ಗುರುಗಳಾದ ಮೊಳ್ಳೇರ ಸುಬ್ಬಯ್ಯ ಹಾಗೂ ಚೇಂದಂಡ ಈರಪ್ಪ ಅವರಂತಹ ಶಿಲ್ಪಿಗಳು ಕೆತ್ತಿದ ಆಟಗಾರರ ಭವಿಷ್ಯ ಎಂದೂ ಅರ್ಥರಹಿತವಾಗುವುದಿಲ್ಲ. ಇಂತಹ ಹಾಕಿಯ ಮಹಾನ್ ತರಬೇತುದಾರರ ಅವಶ್ಯಕತೆ ಇಂದು ಕರ್ನಾಟಕ ರಾಜ್ಯಕ್ಕೆ ಬೇಕಿದೆ.
ಕ್ರೀಡಾ ಶಾಲೆಯ ದಾಖಲೆ :: 1982ರಲ್ಲಿ ಕ್ರೀಡಾ ಶಾಲೆ ಆಟಗಾರರು ಸುಲೇವನ್ ಪೊಲೀಸ್ ಮೈದಾನದಲ್ಲಿ ಆಡಿದ ಅದ್ಭುತ ಆಟ ಮರೆಯಲಾಗುವುದಿಲ್ಲ. ಬಹಳಷ್ಟು ಹೆಸರುವಾಸಿಯಾದ ತಂಡಗಳೊಡನೆ ಸೆಣಸಾಡಿ ಗೆದ್ದರು. ಈ ಆಟಗಾರರ ಆಟ ನೋಡಲು ಬಹಳಷ್ಟು ಅಭಿಮಾನಿಗಳು ಬಂದು ಸೇರಿದ್ದರು. ಈ ಅದ್ಬುತ ಕ್ಷಣಗಳು ಕರ್ನಾಟಕದ ಹಾಕಿಯ ಚರಿತ್ರೆಯನ್ನೇ ಬದಲಾಯಿಸಿತು.
ಹಾಕಿ ಕ್ರೀಡೆ :: ಕ್ರೀಡಾ ಶಾಲೆಯ ಅದ್ಭುತ ಫುಲ್ ಬ್ಯಾಕ್ ಆಗಿ ಹೊರಹೊಮ್ಮಿದ ಕಾಳಪ್ಪನವರು, ಬೆಂಗಳೂರು ಯುನಿವರ್ಸಿಟಿ ತಂಡ ಹಾಗೂ ಕರ್ನಾಟಕ ಜೂನಿಯರ್ ತಂಡ ಪ್ರತಿನಿಧಿಸಿದ್ದರು. 1983 ರಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐರನ್ ಕಾಳ ಎಂದೇ ಪ್ರಸಿದ್ಧರಾದ ಇವರ ಜೀವನದಲ್ಲಿ ದೂರದೃಷ್ಟ ವಶವಾಗಿ ಆಂಟಿ ರೇಬಿಸ್ ಚುಚ್ಚುಮದ್ದಿನಿಂದಾಗಿ ಅವರು ಕಾಲಿನ ಸ್ವಾಧೀನ ಕಳೆದುಕೊಳ್ಳಬೇಕಾಯಿತು. ಭಾರತ ಆಡುವ ಕನಸು ನುಚ್ಚುನೂರಾಯಿತು. ಎಂ.ಪಿ.ಗಣೇಶ್, ಮೊಳ್ಳೆರ ಸುಬ್ಬಯ್ಯ ಹಾಗೂ ಚೇಂದಂಡ ಈರಪ್ಪ ಅವರ ಅನಿಸಿಕೆಯಂತೆ ಅಂಜಪರುವಂಡ ಸುಬ್ಬಯ್ಯ, ಚೆಪ್ಪುಡೀರ.ಎಸ್.ಪೂಣಚ್ಚ, ಕುಲ್ಲೆಟೀರ ಉತ್ತಯ್ಯ, ಮುಕ್ಕಾಟಿರ ವಿನೋದ್ ಚಿಣ್ಣಪ್ಪ ಹಾಗೂ ಕಾಳಪ್ಪನವರು ಭಾರತ ಆಡುವುದು ಖಚಿತ ಎಂದು ಬಿಂಬಿಸಿದ್ದರು. ಆದರೆ ದುರಾದೃಷ್ಟವಶಾತ್ ಕಾಳಪ್ಪ ಅವರ ಕನಸುಗಳೆಲ್ಲ ನುಚ್ಚುನೂರಾಯಿತು. ಕಾನೂನಿನಂತೆ ಕ್ರೀಡಾಶಾಲೆಯಿಂದ ಅವರು ಹೊರಬಂದರು. ಇದರಿಂದ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು.
ಜೀವನದಲ್ಲಿ ಜಿಗುಪ್ಸೆ :: ತನ್ನ ಜೀವನದಲ್ಲಿ ಇಂತಹ ದುರಂತ ಸೃಷ್ಟಿಯಾದ ಕಾರಣ ಕಾಳಪ್ಪನವರು ಈ ಜೀವನವೇ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದರು, ಆದರೆ ಭಗವಂತನು ಇಂತಹ ವ್ಯಕ್ತಿ ಸಮಾಜಕ್ಕೆ ಬೇಕು ಎಂದು ಅವರನ್ನು ಉಳಿಸಿಕೊಂಡಂತಾಯಿತು.
ಕಾಳಪ್ಪನವರ ಪ್ರತಿಜ್ಞೆ :: ಹಾಕಿಯಲ್ಲಿ ಅವರು ಸೋತಿದ್ದರು ಕೂಡ ತನ್ನ ಕುಟುಂಬದವರು ಭಾರತ ಪ್ರತಿನಿಧಿಸಬೇಕು ಎಂಬ ಛಲ, ಅದರಂತೆ ಅವರ ತಮ್ಮ ಬಾಳೆಯಡ ಪೂಣಚ್ಚ ಅವರು ಅತ್ಯುತ್ತಮ ಗೋಲ್ ಕೀಪರ್ ಆಗಿ ಭಾರತವನ್ನು ಪ್ರತಿನಿಧಿಸಿದರು. ಅವರ ಮತ್ತೊಬ್ಬ ತಮ್ಮ ಕಿಶನ್ ಪೂವಯ್ಯ, ಒಳ್ಳೆಯ ಹಾಕಿ ಆಟಗಾರ, ಮಡಿಕೇರಿಯಲ್ಲಿ ವಕೀಲ ಹಾಗು ನೋಟರಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಒಳ್ಳೆಯ ಬರಹಗಾರರು ಕೂಡ.
ಅವರು ಹೆಸರಾಂತ ಕಾಲೇಜಿನಲ್ಲಿ ಓದಿದ್ದರು ಕೂಡ, ತನ್ನ ಕಾಲಿನ ಸ್ವಾಧೀನ ಕಳೆದುಕೊಂಡು ಜೀವನಪೂರ್ತಿ ಅಂಗವೈಕಲ್ಯತೆಯಿಂದ ಬದುಕಬೇಕೆಂದರೂ ಛಲ ಬಿಡದೆ, 1987ರಲ್ಲಿ ಒಂದು ಚಿಕ್ಕ ಕೊರಿಯರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ನಂತರ ಅದೇ ಕಂಪನಿಗೆ ಜೂನಿಯರ್ ಎಕ್ಸಿಕ್ಯೂಟಿವ್ ಆಗುತ್ತಾರೆ. ಶಾಲಿಮಾರ್ ಪೈಂಟ್ ಕಂಪನಿಯಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿ ಪೈಂಟ್ ಮ್ಯಾನುವಲ್ ಅನ್ನು ಅಭಿವೃದ್ಧಿಪಡಿಸುತ್ತಾರೆ.
ಬ್ಲೂ ಡಾರ್ಟ್ :: 1997ರಲ್ಲಿ Bluedart & DHL £À Channel head ಆಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ 60 ಕೋಟಿಯಷ್ಟು ವಹಿವಾಟು ನಡೆಸಿ, ಅದನ್ನು 1500 ಕೋಟಿ ವಹಿವಾಟು ನಡೆಸುವ ಕಂಪನಿಯನ್ನಾಗಿ ಬೆಳೆಸುತ್ತಾರೆ. ಒಆ ಸ್ಥಾನಕ್ಕೆ ಮುಂಬೈಗೆ ಆಯ್ಕೆಯಾದರೂ, ಅದನ್ನು ಬಿಟ್ಟು senior vice President ಜಿoಡಿ South Indian region ಆಗಿ, 11,000ಕ್ಕೂ ಅಧಿಕ ನೌಕರರ ಬೆನ್ನೆಲುಬಾಗಿ ನಿಂತಿದ್ದಾರೆ. ಕಾಳಪ್ಪ ನವರಿಗೆ ಶಾಲಿಮಾರ್ ಪೈಂಟ್ಸ್ ಹಾಗೂ luedart & DHL ನಿಂದ ಬೆಸ್ಟ್ ಸೇಲ್ಸ್ ಪರ್ಸನ್ ಪ್ರಶಸ್ತಗಳನ್ನು ಶಾಖೆ ಹಾಗೂ ವಲಯ ಮಟ್ಟದಲ್ಲಿ ಪಡೆದಿದ್ದಾರೆ.
ಬಹುಮುಖ ಪ್ರತಿಭೆ :: ಕಾಳಪ್ಪನವರು ಒಬ್ಬ ಪ್ರೇರಕ ಭಾಷಣಕಾರ, ಬರಹಗಾರ ಹಾಗೂ ಅದ್ಭುತ ಕವಿ. ಪುಸ್ತಕ ಹಾಗೂ ಸಂಗೀತ ಇವರ ಸ್ನೇಹಿತರು ಎಂದರೆ ತಪ್ಪಿಲ್ಲ. ಅವಶ್ಯಕತೆ ಇರುವವರಿಗೆ ತಮ್ಮಿಂದಾಗುವ ಎಲ್ಲಾ ರೀತಿಯ ಸಹಾಯ ಮಾಡುವ ವಿಶಾಲ ಹೃದಯಿ. ಕಾಳಪ್ಪನವರ ಪತ್ನಿ, ಲತ ಕಮಲಾಕ್ಷಿ (ತಾಮನೆ ಮಂಗೇರಿರ) ಇವರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳಿದ್ದು. ಮಗಳು ಲಕ್ಷ ಕಾಳಪ್ಪ ಬಿ.ಎ ಎಲ್.ಎಲ್.ಬಿ ಮುಗಿಸಿ, ಎಲ್.ಎಲ್.ಎಂ ವಕೀಲ ತರಬೇತಿ ಪಡೆಯುತ್ತಿದ್ದಾರೆ. ನ್ಯಾಷನಲ್ ಕಾನೂನು ಕಾಲೇಜಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದು. ಕರ್ನಾಟಕ ಮಹಿಳಾ ಪೊಲೀಸನ ಅಭಿವೃದ್ಧಿ ತರಬೇತಿದಾರರಾಗಿದ್ದಾರೆ. ಇವರು ಕೊಳ್ಳಿಮಾಡ ಡಾ.ಸೋಮಣ್ಣ ಅವರನ್ನು ವರಿಸಿದ್ದಾರೆ. ಮಗ ಮಿಥುಲ್ ಅಯ್ಯಪ್ಪ ಬಿ.ಕಾಂ ಎಲ್.ಎಲ್.ಬಿ ಮುಗಿಸಿ ಬೆಂಗಳೂರಿನಲ್ಲಿ ವಕೀಲ ತರಬೇತಿ ಪಡೆಯುತ್ತಿದ್ದು. ಇವರಿಬ್ಬರು ಸೇರಿ ಕಾಳಪ್ಪ ಅಂಡ್ ಕೋ. ಎನ್ನುವ ಸ್ವಂತ ಕಾನೂನು ಸಂಸ್ಥೆಯನ್ನು ಇಂದಿರಾನಗರದಲ್ಲಿ ಹೊಂದಿದ್ದಾರೆ.
1982-83ರ ಅಂದಿನ ಕ್ರೀಡಾ ಶಾಲೆ :: 1982, 83, 84ರಲ್ಲಿ ಕ್ರೀಡಾ ಶಾಲೆಯಲ್ಲಿ ಆಡಿದ ಆಟಗಾರರೆಲ್ಲರಿಗೂ ರಾಷ್ಟ್ರೀಯ ಬ್ಯಾಂಕು ಹಾಗೂ ಕಂಪನಿಗಳಲ್ಲಿ ಕೆಲಸ ಸಿಕ್ಕಿದೆ. ಬಹುತೇಕರು ಅಂತರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂದು ಜವಾಬ್ದಾರಿಯುತ ಹುದ್ದೆಯಲ್ಲೂ ಕೂಡ ಇದ್ದಾರೆ. ಅವರು ಶಿಸ್ತು ಹಾಗೂ ಸಮಯ ಪಾಲನೆಗೆ ಹೆಚ್ಚು ಬೆಲೆ ಕೊಡುತ್ತಿದ್ದರು. ಬಹಳಷ್ಟು ಆಟಗಾರರು ಇದರಿಂದ ಜೀವನ ಕಟ್ಟಿಕೊಂಡಿದ್ದಾರೆ. ಇವರೆಲ್ಲರ ಮಾರ್ಗದರ್ಶನ ಇಂದು ಹಾಕಿಗೆ ಬೇಕಾಗಿದೆ.
ಕೊನೆಯ ಹನಿ :: ಹಾಕಿಯಲ್ಲಿ ಆಯ್ಕೆಯಾಗದೆ ಹತಾಶರಾದ ಅದಿಷ್ಟೋ ಮಕ್ಕಳಿಗೆ ಈ ಲೇಖನ ಒಂದು ಮಾದರಿಯಾಗಲಿ. ಕಾಳಪ್ಪನವರಂತೆ ಹಾಕಿಯಲ್ಲಿ ಸೋತರು ಜೀವನದಲ್ಲಿ ಗೆಲ್ಲಬೇಕೆಂಬ ಛಲವನ್ನು ಇಂದಿನ ಯುವ ಪೀಳಿಗೆ ತಮ್ಮಲ್ಲಿ ರೂಡಿಸಿಕೊಳ್ಳಬೇಕು. ಕೊಡಗಿನ ಯುವ ಹಾಕಿ ಆಟಗಾರರು ಇವರಂತೆ ಕ್ರೀಡಾ ಮನಸ್ಸಿನಿಂದ ಮುನ್ನುಗ್ಗಬೇಕು ಎಂಬುದೇ ಈ ಬರಹದ ಮೂಲ ಸಂದೇಶ. ಇವರೊಬ್ಬ ಆದರ್ಶ ವ್ಯಕ್ತಿ. ಕಬ್ಬಿಣ ಹೇಗೆ ಎಂದೂ ಜಗ್ಗುವುದಿಲ್ಲವೋ ಹಾಗೆಯೇ ಐರನ್ ಕಾಳಪ್ಪ . ಇವರ ಮಾರ್ಗದರ್ಶನ ಇಂದು ಕೊಡಗಿಗೆ ಮತ್ತು ಹಾಕಿಗೆ ಅವಶ್ಯಕತೆಯಿದೆ. ಅವರ ಕುಟುಂಬಕ್ಕೆ ಶುಭವಾಗಲಿ. 1982 ರ ಕ್ರೀಡಾ ಶಾಲೆಯ ಎಲ್ಲಾ ಆಟಗಾರರ ಪರವಾಗಿ ನಮನ. “Kalappa The Great”
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ
1982 ಕ್ರೀಡಾ ಶಾಲೆ