ಮಡಿಕೇರಿ ಅ.24 NEWS DESK : ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆಯುತ್ತಿರುವ 17 ವರ್ಷದೊಳಗಿನ ಬಾಲಕಿಯರ ಸಿ.ಬಿ.ಎಸ್.ಇ. ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ಮಡಿಕೇರಿಯ ಕೊಡಗು ವಿದ್ಯಾಲಯ ಬಾಲಕಿಯರ ತಂಡವು ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಸೆಮಿ ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ತಂಡವು ತಮಿಳುನಾಡಿನ ಸಚ್ಚಿದಾನಂದ ಜ್ಯೋತಿ ನಿಕೇತನ್ ಶಾಲಾ ತಂಡವನ್ನು 2-0 ಗೋಲುಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತು. ಕೊಡಗು ವಿದ್ಯಾಲಯ ತಂಡದ ನಾಯಕಿ ಪರ್ಲಿನ್ ಪೊನ್ನಮ್ಮ ಫೀಲ್ಡ್ ಗೋಲು ಬಾರಿಸಿದರೆ ಮುನ್ನಡೆ ಆಟಗಾರ್ತಿ ನೀತು ಚೌದ್ರಿ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ಬಾರಿಸುವ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ತಂಡವು ಉತ್ತರ ಪ್ರದೇಶದ ಶ್ರೀ ಠಾಕೂರ್ ದ್ವಾರಾ ಬಾಲಿಕ ವಿದ್ಯಾಲಯ ತಂಡವನ್ನು 1-0 ಗೋಲುಗಳಿಂದ ಸೋಲಿಸಿತ್ತು. ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ಮಡಿಕೇರಿಯ ಕೊಡಗು ವಿದ್ಯಾಲಯ ತಂಡವು ಹರಿಯಾಣದ ಬಲಿಷ್ಠ ತಂಡವಾದ ಲಿಟ್ಲ್ ಏಂಜಲ್ ಸ್ಕೂಲ್ ಸೋನಿಪತ್ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ.