ಕುಶಾಲನಗರ ನ.2 NEWS DESK : ಕನ್ನಡ ನಾಡಿನಲ್ಲಿರುವ ಭಾಷಾ ಶ್ರೀಮಂತಿಕೆ ಜಗತ್ತಿನ ಯಾವುದೇ ಭಾಷೆಯಲ್ಲಿ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಿಸಿದರು. ಚಿಕ್ಕ ಅಳುವಾರ ಜ್ಞಾನ ಕಾವೇರಿ ಕ್ಯಾಂಪಸ್ ನಲ್ಲಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಹುಟ್ಟಿರುವ ಹೆಮ್ಮೆ ನಮ್ಮದು. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ನಮ್ಮ ಕರ್ನಾಟಕ ರಾಜ್ಯವು ಪ್ರಾಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಪ್ರಾದೇಶಿಕವಾರು ಜಿಲ್ಲೆಗಳನ್ನು ವಿಂಗಡಣೆಗೊಂಡಿದ್ದು, ಇಲ್ಲಿನ ಭಾಷೆ, ಮಣ್ಣು ಮತ್ತು ಜೀವರಾಶಿಗಳಿಂದ ಸಂಪದ್ಭರಿತವಾಗಿರುವುದನ್ನು ಕಾಣಬಹುದು. ಕರ್ನಾಟಕದಲ್ಲಿ ಕನ್ನಡ ತಾಯಿ ಮಕ್ಕಳಾಗಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕು ಮತ್ತು ಉಳಿಸಬೇಕು. ಆದರೆ ಇಂದಿಗೂ ಅದೆಷ್ಟೋ ಮಕ್ಕಳಿಗೆ ಸರಿಯಾಗಿ ಕನ್ನಡವನ್ನು ಮಾತನಾಡುವುದಕ್ಕೆ ಬರುವುದಿಲ್ಲ. ಬದಲಿಗೆ ಇಂಗ್ಲೀಷ್ ಭಾಷೆಯನ್ನು ಮಾತನಾಡುವುದೇ ಬಹಳ ದೊಡ್ಡ ಗೌರವ ಎಂಬ ಕಲ್ಪನೆಯಲ್ಲಿರುವುದು ಕಂಡುಬರುತ್ತದೆ. ಕನ್ನಡ ಭಾಷೆಯನ್ನು ಹೊರತುಪಡಿಸಿ ಮತ್ತಿನ್ನಾವುದೇ ಭಾಷೆಗಳನ್ನು ಕಲಿಯಬಾರದು ಎಂಬ ಯಾವುದೇ ನಿರ್ಭಂದವಿಲ್ಲ. ಆದರೂ ಕನ್ನಡ ತಾಯಿಯ ಮಕ್ಕಳಾಗಿ ಕನ್ನಡವನ್ನು ಮಾತನಾಡದಿದ್ದರೆ ಹೇಗೆ ? ಸುವರ್ಣ ಕರ್ನಾಟಕ ಸಂಭ್ರಮದಲ್ಲಿರುವ ನಾವು, ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕರ್ನಾಟಕ, ಕನ್ನಡ, ಕನ್ನಡಿಗರ ಬಗೆಗಿನ ಕಾಳಜಿಯನ್ನು ತೊರಬಾರದು. ವರ್ಷದ 365 ದಿನಗಳು ಕೂಡ ಕನ್ನಡ ನಾಡು-ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವದ ಬಗೆಗಿನ ವಿಚಾರವನ್ನು ಎಲ್ಲೆಡೆ ಪಸರಿಸುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ದೀಪ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.