ನಾಪೋಕ್ಲು ನ.6 NEWS DESK : ಚೇರಂಬಾಣೆಯ ಕೊಳಗದಾಳು ಗ್ರಾಮದ ಶತಾಯುಷಿ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ನಿವೃತ್ತ ಯೋಧ ಅಜ್ಜಿನಂಡ ಮೊಣ್ಣಪ್ಪ ಅವರ ನೂರನೇ ಜನ್ಮದಿನಾಚರಣೆಯನ್ನು ಚೇರಂಬಾಣೆ ಕೊಡವ ಸಮಾಜದಲ್ಲಿ ಆಚರಿಸಲಾಯಿತು. ದಿವಂಗತ ಅಜ್ಜಿನಂಡ ಮೇದಪ್ಪ ಹಾಗೂ ಚಿಣ್ಣವ್ವ ದಂಪತಿಯ ಪುತ್ರ ಶತಾಯುಷಿ ಎಂ.ಮೊಣ್ಣಪ್ಪ ಅವರನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿ ಕೊಟ್ ಪಾಟ್ ಮೂಲಕ ಕರೆತರಲಾಯಿತು. ಆ ಬಳಿಕ ಕುಟುಂಬ ಬಂಧು ಮಿತ್ರರೊಂದಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲರ ಪರವಾಗಿ ಕೋಟೆರ ಪ್ರಭು ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭ ಅವರ ಸಹೋದರ ಅಪ್ಪಣ್ಣ (97) ಉಪಸ್ಥಿತರಿದ್ದು, ಆಗಮಿಸಿದ ಎಲ್ಲರೂ ಶತಾಯುಷಿಗೆ ತಮ್ಮ ನೆನಪಿನ ಕಾಣಿಕೆಗಳನ್ನು ನೀಡಿ ಇಬ್ಬರ ಆಶೀರ್ವಾದ ಪಡೆದುಕೊಂಡು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪೆÇ್ರ ಎಂ.ಬಿ.ನಂಜುಂಡ, ಬೇಂಗೂರು ನಾಡು ಕಡಪಾಲಪ್ಪ ದೇವಸ್ಥಾನದ ಅಧ್ಯಕ್ಷ ತೇಲಪಂಡ ಕೆ.ಮಂದಣ್ಣ, ನಿವೃತ್ತ ಪೆÇಲೀಸ್ ಅಧಿಕಾರಿ ಮಣವಟ್ಟಿರ ಸಿ.ಕುಶಾಲಪ್ಪ ಸನ್ಮಾನಿತರ ಗುಣಗಾನ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು. ಈ ಸಂದರ್ಭ ಪ್ರಮುಖರಾದ ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಪಿ.ಗಣಪತಿ, ಒಲಂಪಿಯನ್ ಚೆಪ್ಪುಡಿರ ಎಸ್.ಪೂಣಚ್ಚ, ಸಿಎನ್ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕೊಡಗು ಏಕೀಕರಣರಂಗದ ಪ್ರಮುಖ ತಮ್ಮು ಪೂವಯ್ಯ, ಕೊಡಗು ಏಲಕ್ಕಿ ಸಂಘದ ಅಧ್ಯಕ್ಷ ಸೂದನ ಈರಪ್ಪ ಸೇರಿದಂತೆ ಬಂಧು ಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು. ಶತಾಯುಷಿ ಪೊನ್ನಪ್ಪ ಅವರಿಗೆ ಓರ್ವ ಪುತ್ರ, ಐದು ಪುತ್ರಿಯರಿದ್ದು, ಪುತ್ರ ಗೋಪಾಲಕೃಷ್ಣ, ಮಗಳು ವಾಣಿ (ಉಮಾದೇವಿ) ಸೇರಿದಂತೆ ಕುಟುಂಬದ ಸದಸ್ಯರು ಬಂದು ಭಾಗವಹಿಸಿದವರನ್ನೆಲ್ಲ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.
ವರದಿ : ದುಗ್ಗಳ ಸದಾನಂದ