ಮಡಿಕೇರಿ ನ.11 NEWS DESK : ಚೆಟ್ಟಳ್ಳಿಯ ಚೇರಳ ಗೌಡ ಸಂಘದ 16ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಪೂರ್ಣಗೊಂಡಿರುವ ಸಮಾಜದ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಭೆ ನಿರ್ಣಯ ಕೈಗೊಂಡಿತು. ಅಯ್ಯಂಡ್ರ ರಾಘವಯ್ಯ ಅವರು ಮಾತನಾಡಿ 10 ಕುಟುಂಬ 18 ಗೋತ್ರದ ಅಪೂರ್ಣಗೊಂಡಿರುವ ಸಂಘದ ಕಟ್ಟಡವನ್ನು ಸರ್ಕಾರದ ಅನುದಾನ ಮತ್ತು ಸಂಘದ ಸದಸ್ಯರುಗಳ ಸಹಕಾರ ಪಡೆದು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಈ ಹಿಂದೆ ನಡೆಸಿದಂತೆ ಕಾಲ್ಚೆಂಡು ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. 2023- 24ನೇ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಆಜೀರ ಧನಂಜಯ ಹಾಗೂ ಲೆಕ್ಕ ಪರಿಶೋಧನೆಯನ್ನು ಸಮಾಜದ ಉಪ ಖಜಾಂಚಿ ಪೇರಿಯನ ಉದಯ ಮಂಡಿಸಿದರು. ಖಜಾಂಚಿ ಮುಕ್ಕಾಟಿ ಪಳಂಗಪ್ಪ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಪೇರಿಯನ ಪೂಣಚ್ಚ ವಂದಿಸಿದರು. ಕುಮಾರಿ ಪೇರಿಯನ ರಿಧಿ ಹಾಗೂ ಪೇರಿಯನ ಜೀವಿತ ಪ್ರಾರ್ಥಿಸಿದರು. ಉಪಾಧ್ಯಕ್ಷ ಹೊಸಮನೆ ಪೂವಯ್ಯ, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮೃತಪಟ್ಟ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.