ಕುಶಾಲನಗರ ನ.11 NEWS DESK : ಮಂಡ್ಯ ನಗರದಲ್ಲಿ ಡಿ.20-22 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಕುಶಾಲನಗರದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಕುಶಾಲನಗರ ತಾಲ್ಲೂಕು ಆಡಳಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ- ಸಂಸ್ಥೆಗಳು, ಕನ್ನಡಾಭಿಮಾನಿಗಳು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ನಾಗರಿಕರ ಸಮ್ಮುಖದಲ್ಲಿ ಕನ್ನಡ ರಥವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶಾಸಕ.ಡಾ ಮಂತರ್ ಗೌಡ ರಥದಲ್ಲಿನ ಕನ್ನಡ ಭುವನೇಶ್ವರಿ ಪುತ್ಥಳಿಗೆ ಪುಷ್ಪ ಅರ್ಪಿಸುವ ಮೂಲಕ ಕನ್ನಡ ಜ್ಯೋತಿ ರಥವನ್ನು ಕನ್ನಡಾಭಿಮಾನಿಗಳು ಹಾಗೂ ನಾಗರಿಕರ ಪರವಾಗಿ ಬರಮಾಡಿಕೊಂಡು, ಪ್ರತಿಯೊಬ್ಬರೂ ಕನ್ನಡ ನಾಡು- ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಕನ್ನಡಾಭಿಮಾನಿಗಳು ಹಾಗೂ ನಾಗರಿಕರು ರಥವನ್ನು ಬರಮಾಡಿಕೊಂಡು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿದರು. ರಥದೊಂದಿಗೆ ಸಾಗಿದ ವಿದ್ಯಾರ್ಥಿಗಳು, ವಿವಿಧ ಸಮಾಜಗಳು ಹಾಗೂ ಸಂಘ- ಸಂಸ್ಥೆಗಳು ರಥಕ್ಕೆ ಸ್ವಾಗತ ಕೋರುವ ಬ್ಯಾನರ್ ಹಿಡಿದು ಕನ್ನಡ ನಾಡು- ನುಡಿ , ಸಂಸ್ಕೃತಿ ಕುರಿತ ಘೋಷಣೆಗಳನ್ನು ಮೊಳಗಿಸಿದರು. ಪುರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ, ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಕುಮಾರ್, ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹ್ಮದ್, ರೇವತಿ ರಮೇಶ್, ನಿರ್ದೇಶಕಿ ಫ್ಯಾನ್ಸಿ ಮುತ್ತಣ್ಣ, ಡಿಡಿಪಿಐ ಸಿ.ರಂಗಧಾಮಪ್ಪ, ಡಿವೈಎಸ್ಪಿ ಗಂಗಾಧರಪ್ಪ, ಪ್ರಭಾರ ಬಿಇಓ ಜಿ.ಎಂ.ಹೇಮಂತ್, ಕುಶಾಲನಗರ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು. ಮೆರವಣಿಗೆಯಲ್ಲಿ ಏಳನೇ ಹೊಸಕೋಟೆಯ ಚಂಡೆ ವಾದ್ಯ ಗಮನ ಸೆಳೆಯಿತು.