ಮಡಿಕೇರಿ ನ.11 NEWS DESK : ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಗ್ಗೋಡ್ಲು ಬಳಿ ಸುಮಾರು 8 ಲಕ್ಷ ರೂ. ಮೌಲ್ಯದ 27 ಬೀಟೆ ಮರ ನಾಟಾ ಸಹಿತ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ ವಾಹನ ಒಂದರಲ್ಲಿ ಬೀಟೆ ಮರವನ್ನು ಸಾಗಿಸುತ್ತಿರುವ ಕುರಿತು ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ವಿರಾಜಪೇಟೆ-ಕಗ್ಗೋಡ್ಲು ಮಾರ್ಗವಾಗಿ ಬರುತ್ತಿದ್ದ ಶುಂಠಿ ತುಂಬಿದ ಪಿಕ್‍ಅಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ಸಂದರ್ಭ ಮೇಲ್ಭಾಗದಲ್ಲಿ 38 ಚೀಲಗಳಲ್ಲಿ ಶುಂಠಿ ತುಂಬಿರುವುದು ಕಂಡು ಬಂದಿದೆ. ಸಂಶಯದಿಂದ ವಾಹನವನ್ನು ಪರಿಶೀಲಿಸಿದಾಗ ಕೆಳಭಾಗದಲ್ಲಿ ಒಟ್ಟು 27 ಬೀಟೆ ಮರದ ನಾಟಾಗಳನ್ನು ಜೋಡಿಸಿರುವುದು ಪತ್ತೆಯಾಗಿದೆ. ಸ್ಥಳದಲ್ಲೇ ವಾಹನದ ಚಾಲಕ ಹೆಚ್.ಡಿ.ಕೋಟೆ ನಿವಾಸಿ ಆದಿತ್ಯ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಿದ ಸಂದರ್ಭ ವಿರಾಜಪೇಟೆಯಿಂದ ಹೊಳೆ ನರಸೀಪುರದ ಕಡೆಗೆ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿದ್ದು, ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಸೀನ್ ಬಾಷಾ ಮುಂದಾಳತ್ವದಲ್ಲಿ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ ಸಿ.ಉಮೇಶ್, ಮಲ್ಲಯ್ಯ ಹಿರೇಮಠ್, ಸಿಬ್ಬಂದಿಗಳಾದ ಸಿ.ಸಿ.ಯತೀಶ್, ವಾಸುದೇವ ಯು.ಸಿ, ಸಂತೋಷ್ ಪಿ.ಬಿ, ನಿಖಿಲ್, ಮೋಹನ್, ವಚನ್, ತಿಮ್ಮಯ್ಯ, ಸುಧಾ ಮತ್ತಿತ್ತರರು ಕಾರ್ಯಾಚರಣೆ ನಡೆಸಿದರು.