ಕುಶಾಲನಗರ ನ.12 NEWS DESK : ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಅಮೃತ ವಿಘ್ನೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕೈಗಾರಿಕಾ ಬಡಾವಣೆಯ ಕಾವೇರಿ ನದಿ ದಂಡೆಯ ಅಮೃತ ಕಾಫಿ ಸಂಸ್ಕರಣಾ ಘಟಕದ ಬಳಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣಪತಿ ದೇಗುಲದಲ್ಲಿ ದೇವರಿಗೆ ಗಣಪತಿ ಹೋಮ, ಧನ್ವಂತ್ರಿ ಹೋಮ, ವಿಷ್ಣು ಸಹಸ್ರ ನಾಮಾರ್ಚನೆ ಮೊದಲಾದ ಮಹಾ ಪೂಜೆಗಳು ನೆರವೇರಿದವು. ಇದಕ್ಕೂ ಮುನ್ನಾ ಬೆಳಗ್ಗೆ ದೇವರಿಗೆ ವಿವಿಧ ಅಭಿಷೇಕಗಳು ನೆರವೇರಿದವು. ತಮಿಳುನಾಡಿನ ತ್ರಿಕೋಟದಲ್ಲಿನ ಸೌಮ್ಯ ನಾರಾಯಣ ಸ್ವಾಮಿ ದೇವಾಲಯದ ಅರ್ಚಕ ಮಾಧವನ್ ಅಯ್ಯಂಗಾರ್ ನೇತೃತ್ವದ ವಟುಗಳಿಂದ ಪೂಜಾ ವಿಧಿಗಳು ನಡೆದವು. ಪೂಜೋತ್ಸವದಲ್ಲಿ ಕೂಡ್ಲೂರು ಕೈಗಾರಿಕಾ ಬಡಾವಣೆಯ ವಿವಿಧ ಕಾಫಿ ಸಂಸ್ಕರಣಾ ಘಟಕಗಳ ಮಾಲೀಕರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನ ದೇವರಿಗೆ ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಗೈದು ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ನೆರೆದ ಭಕ್ತಗಣಕ್ಕೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅಮೃತ ವಿಘ್ನೇಶ್ವರ ದೇಗುಲದ ಧರ್ಮದರ್ಶಿ ಸುಂದರಂ ರಾಮಸ್ವಾಮಿ, ವಿನ್ಸಿ ರಾಮಸ್ವಾಮಿ, ಪ್ರಧಾನ ವ್ಯವಸ್ಥಾಪಕ ಕಣ್ಣನ್ ಸೇರಿದಂತೆ ಅಮೃತ ಗ್ರೂಫಿನ ಭಕ್ತರು ಇದ್ದರು.