ಸುಂಟಿಕೊಪ್ಪ ನ.13 NEWS DESK : ಕಳೆದ ಕೆಲವು ತಿಂಗಳುಗಳಿಂದ ದುರಸ್ತಿಗೀಡಾಗಿ ಮೂಲೆಗುಂಪಾಗಿದ್ದ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ದುರಸ್ತಿಗೊಂಡು ಸಾರ್ವಜನಿಕ ಸೇವೆಗೆ ಮತ್ತೆ ಲಭ್ಯವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ವಾಹನವು ಸಾರ್ವಜನಿಕರ ಸೇವೆಗೆ ದೊರೆಯದೆ ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿತ್ತು. ಈ ಬಗ್ಗೆ ಸೋಶಿಯಲ್ ಡೆಮೊಕ್ರಿಟಿಕ್ ಟ್ರೇಡ್ ಯೂನಿಯನ್ ಸಂಘಟನೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದೂರು ಸಲ್ಲಿಸಿತ್ತು. ಅಧಿಕಾರಿಗಳು ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಆ್ಯಂಬುಲೆನ್ಸ್ ವಾಹನದ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ.ಅಧಿಕಾರಿಯ ಕಾರ್ಯವನ್ನು ಯೂನಿಯನ್ ಜಿಲ್ಲಾಧ್ಯಕ್ಷ ಅಣ್ಣಾ ಶರೀಫ್, ಸಂಘಟನಾ ಕಾರ್ಯದರ್ಶಿ ಕೆ.ಎ.ಲತೀಫ್ ಶ್ಲಾಘಿಸಿದ್ದಾರೆ. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಹಲವು ಸಮಸ್ಯೆಗಳ ಕುರಿತು ನ.6ರಂದು ಎಸ್ಡಿಟಿಯು ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ಭೇಟಿ ಮಾಡಿ ಗಮನ ಸೆಳೆಯಲಾಗಿತ್ತು. ಸಮಸ್ಯೆ ಕುರಿತು ದೂರು ಸಲ್ಲಿಸಿದ ಜೊತೆಗೆ ಸೋಶಿಯಲ್ ಡೆಮೊಕ್ರಿಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಸಲಾಗಿತ್ತು. ನ.7ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ವಾಹನ ದುರಸ್ತಿಗೆ ಕ್ರಮ ಕೈಗೊಂಡಿದ್ದರು. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿ ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಬೇಡಿಕೆಯನ್ನು ಮನವಿಯ ಮೂಲಕ ಸಲ್ಲಿಸಲಾಗಿದ್ದು, ಕೂಡಲೇ ಇಲ್ಲಿನ ಸಮಸ್ಯೆ ಕುಂದು ಕೊರತೆಗಳನ್ನು ನೀಗಿಸಲು ಮುಂದಾಗಬೇಕೆಂದು ಸಂಘಟನೆ ಆಗ್ರಹಿಸಿದೆ.