ಸೋಮವಾರಪೇಟೆ ನ.13 NEWS DESK : ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಭೂಮಿ ತೆರವಿಗೆ ವಿರೋಧ ವ್ಯಕ್ತಪಡಿಸಿ ಡಿಸೆಂಬರ್ ತಿಂಗಳಲ್ಲಿ ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆ ಮಾಡಲಾಗುವುದು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು. ತಾಲ್ಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಸಮುದಾಯಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ರೈತರು ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿ ಜಾಗ ರೈತರಿಗೆ ಸೇರಬೇಕಿದ್ದು, ಈಗ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು, ಸರ್ವೇಗೆ ಮುಂದಾಗಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿ, ಪ್ರತಿಭಟನೆ, ಧರಣಿ, ಅಹೋರಾತ್ರಿ ಪ್ರತಿಭಟನೆಯ ಮೂಲಕ ನ್ಯಾಯ ಪಡೆದುಕೊಳ್ಳವ ಅವಕಾಶವಿದೆ. ರೈತರನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರ ವಕೀಲರನ್ನು ನೇಮಿಸಿಕೊಂಡು ರೈತರಿಗೆ ನ್ಯಾಯ ಕೊಡಿಸುವುದು ಅವರ ಕರ್ತವ್ಯ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ರೈತರನ್ನು ಒಕ್ಕಲಿಬ್ಬಿಸಲು ಸಾಧ್ಯವಿಲ್ಲ. ಜಿಲ್ಲೆಯ ಶಾಸಕರುಗಳು ಸಂಸತ್ ಸದಸ್ಯರು ತಮ್ಮ ಇತಿಮಿತಿಯೊಳಗೆ ರೈತರ ಪರವಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಶೀಘ್ರದಲ್ಲೇ ಅರಣ್ಯ ಸಚಿವರು, ಕಂದಾಯ ಸಚಿವ ಉಪಸ್ಥಿತಿಯಲ್ಲಿ ಜಿಲ್ಲೆಯಲ್ಲೇ ರೈತರೊಂದಗಿನ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು. ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರ ಪರ ನಿಲ್ಲಬೇಕು ಎಂದು ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ಕೆ.ಬಿ.ಸುರೇಶ್ ಮನವಿ ಮಾಡಿದ್ದಾರೆ. ಆಸ್ತಿ ಕಳೆದುಕೊಂಡು ಹೆಚ್ಚಿನ ರೈತರು ಬೀದಿ ಪಾಲಾಗುವ ಆತಂಕ ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹೇಳಿದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಿ ಆ್ಯಂಡ್ ಡಿ ಭೂಮಿ, ಅರಣ್ಯ ಒತ್ತುವರಿ, ಪೈಸಾರಿ ಒತ್ತುವರಿ ಎಷ್ಟು ಆಗಿದೆ ಎಂದು ವೈಜ್ಞಾನಿಕ ಸರ್ವೆಯಾಗಬೇಕು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಂತಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಕುಮಾರ್ ಹೇಳಿದರು. ವಕೀಲ ಬಿ.ಜೆ.ದೀಪಕ್ ಮಾತನಾಡಿ, ಹಿಂದೆ ಸಿ ಆ್ಯಂಡ್ ಡಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಭೂಮಿ ಎಂದು ಕಂದಾಯ ಇಲಾಖೆಯ ಕಡತದಲ್ಲಿ ದಾಖಲಾಯಿತು. ನಂತರ ರೈತರು ಒತ್ತುವರಿ ಮಾಡಿಕೊಂಡು ಕಾಫಿ ಬೆಳೆದರು. ಈಗ ಕೃಷಿಯೋಗ್ಯ ಭೂಮಿಯಾಗಿದೆ. ಆ ಜಾಗವನ್ನು ಈಗ ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾಗುತ್ತಿದೆ. ಬೆಟ್ಟಗುಡ್ಡ, ದೇವರಕಾಡು ಯಾವುದೂ ಒತ್ತುವರಿಯಾಗಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಯಾಗಿ ಕೃಷಿಗೆ ಯೋಗ್ಯವಲ್ಲದ ಭೂಮಿ ಯಾವುದು ಎಂಬವುದು ಸ್ಪಷ್ಟವಾಗಬೇಕು ಎಂದು ಹೇಳಿದರು. ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಸಮಿತಿಯ ದಿವಾಕರ್, ಯೋಗೇಂದ್ರ ಇದ್ದರು.