ಮಡಿಕೇರಿ ನ.13 NEWS DESK : ಗೋಣಿಕೊಪ್ಪಲು ಕಾಫಿ ಮಂಡಳಿ ಹಾಗೂ ಸಕ್ಡೆನ್ ಕಾಫಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಸುಸ್ಥಿರ ಕಾಫಿ ಉತ್ಪಾದನೆಗಾಗಿ ಅತ್ಯುತ್ತಮ ಕೃಷಿ ಪದ್ಧತಿಗಳ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಾಗಾರವು ನಿಟ್ಟೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪ ನಿರ್ದೇಶಕರಾದ ಡಾ. ಕೆ.ಶ್ರೀದೇವಿ ಕಾರ್ಯಾಗಾರವನ್ನು ಉದ್ಘಾಟಿಸಿ ಸುಸ್ಥಿರ ಕಾಫಿ ಉತ್ಪಾದನೆಗಾಗಿ ಅತ್ಯುತ್ತಮ ಕೃಷಿ ಪದ್ಧತಿಗಳನ್ನು ಬೆಳೆಗಾರರು ಅಳವಡಿಸಿಕೊಳ್ಳಲು ಪಾಲಿಸಬೇಕಾದ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ, ಅವುಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಕಾಫಿ ಮಂಡಳಿಯ ವಿಜ್ಞಾನಿ ಡಾ.ಎಸ್.ಎ.ನದಾಫ್ ಮಾತನಾಡಿ, ಸಮಗ್ರ ಪೋಷಕಾಂಶ ನಿರ್ವಹಣೆ ಕಾಫಿ ಬೆಳೆಯಲ್ಲಿ ಅತಿ ಅವಶ್ಯಕ ಹಾಗೂ ಅದರ ಅವಶ್ಯಕತೆಯ ಬಗ್ಗೆ ವಿವರಿಸಿದರು. ರಸಗೊಬ್ಬರಗಳನ್ನು ಕಾಫಿ ಗಿಡಗಳಿಗೆ ಮಣ್ಣಿನ ಮತ್ತು ಎಲೆಗಳ ಮೇಲೆ ಸಿಂಪಡಣೆ ಮಾಡುವ ಮೂಲಕ ಪೋಷಕಾಂಶಗಳನ್ನೂ ಪೂರೈಸಬಹುದೆಂದು ತಿಳಿಸಿದರು. ಕಾಫಿಯಲ್ಲಿ ಸಸ್ಯಮೂಲ ಸಂವರ್ಧನೆ ಮತ್ತು ಕಾಫಿ ಕಸಿ ಮಾಡುವ ಬಗ್ಗೆ ಡಾ.ನಾಗರಾಜ ಗೋಕಾವಿ ಬೆಳೆಗಾರರಿಗೆ ಮಾಹಿತಿ ನೀಡಿದರು. ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ಮುಖಾರೀಬ್ ಸ್ವಾಗತಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಾಫಿ ಬೆಳೆಗಾರರಿಗೆ ಕಾಫಿ ಗಿಡವನ್ನು ನೆಟ್ಟ ನಂತರದ ಕಾಫಿ ಗಿಡಗಳಿಗೆ ಆರೈಕೆ, ನೀರಾವರಿ ನಿರ್ವಹಣೆ, ಕಾಫಿ ಕೃಷಿ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಕ್ಡೆನ್ ಕಾಫಿಯ ಪ್ರಾಜೆಕ್ಟ್ ಮ್ಯಾನೇಜರ್ ರಥನ್ ಕೊಡಗಿನಲ್ಲಿ ಸಕ್ಡೆನ್ ಕಾಫಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಿಟ್ಟೂರು ಗ್ರಾ.ಪಂ ಅದ್ಯಕ್ಷರಾದ ಅಮ್ಮಣ್ಣಿ, ಸದಸ್ಯರಾದ ಕಾಟಿಮಾಡ ಶರಿನ್ ಮುತ್ತಣ್ಣ, ಚೆಕ್ಕರ ಸೂರ್ಯ ಅಯ್ಯಪ್ಪ, ಪಡಿಞರಂಡ ಕವಿತ ಪ್ರಭು, ಅಳಮೆಂಗಡ ಪವಿತ, ಕಾಫಿ ಬೆಳೆಗಾರರಾದ ಅಳಮೇಂಗಡ ಬೋಸ್ ಮಂದಣ್ಣ, ಮುಕ್ಕಾಟ್ಟಿರ ಪೂಣಚ್ಚ, ಮುಕ್ಕಾಟಿರ ಪ್ರಿನ್ಸ್ ಪೊನ್ನಪ್ಪ, ಮೇಚಂಡ ಸೋಮಯ್ಯ, ಕೊಟ್ಟಂಗಡ ಮಧು ಮತ್ತಿರ ಐವತ್ತಕ್ಕೂ ಹೆಚ್ಚು ಬೆಳೆಗಾರರು ಭಾಗವಹಿಸಿದ್ದರು. ಭುವನೇಶ್ವರಿ ವಂದಿಸಿದರು.