ಮಡಿಕೇರಿ ನ.15 NEWS DESK : ಕೊಡವಲ್ಯಾಂಡ್ ಹಕ್ಕೊತ್ತಾಯದ ಪ್ರತಿಪಾದನೆಯ ನಿರಂತರತೆಗಾಗಿ ನ.26 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 34ನೇ ವರ್ಷದ “ಕೊಡವ ನ್ಯಾಷನಲ್ ಡೇ” ಮತ್ತು ಭಾರತದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಕೊಡವರು ಪಾಲ್ಗೊಳ್ಳುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಕೊಡವ ಸಮಾವೇಶ ಕೊಡವರ ರಾಜ್ಯಾಂಗದತ್ತ ಹಕ್ಕೊತ್ತಾಯದ ನಿರಂತರ, ಘಟನಾತ್ಮಕ ಅರಾಜಕೀಯ ಪ್ರಯಾಣವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಪ್ರತಿಧ್ವನಿಸುತ್ತದೆ. ಭಾರತದ ಸಾರ್ವಭೌಮತ್ವ ಮತ್ತು ಪ್ರಭುತ್ವದಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸಲು ಮತ್ತು ವಿಶ್ವರಾಷ್ಟ್ರ ಮಾನ್ಯತೆಯೊಂದಿಗೆ ಆದಿಮಸಂಜಾತ ಕೊಡವರಿಗೆ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಪರಿಗಣನೆ ಮತ್ತು ಕೊಡವರ ಇತರೆ ಹತ್ತು ಶಾಸನ ಬದ್ಧ ಗುರಿಗಳು ಮತ್ತು ಅಶೋತ್ತರಗಳಿಗಾಗಿ ಸಂವಿಧಾನಿಕ ಹಕ್ಕೊತ್ತಾಯಗಳನ್ನು ಸಿಎನ್‍ಸಿ ಪ್ರತಿಪಾದಿಸುತ್ತ ಬಂದಿದೆ. ಕೊಡವ ಲೋಕದ ಸಾಕ್ಷಿ ಪ್ರಜ್ಞೆಯಾದ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಅಡಿಯಲ್ಲಿ ಇವುಗಳನ್ನು ಕಳೆದ 34 ವರ್ಷಗಳಿಂದ ನಿರಂತರವಾಗಿ ಮುನ್ನಲೆಗೆ ತರಲಾಗಿದೆ. ನಮ್ಮ ಆತ್ಮೀಯ ತಾಯ್ನಾಡು ಕೊಡಗು “ಸಿ” ರಾಜ್ಯವನ್ನು ವಿಶಾಲ ಕರ್ನಾಟಕ ರಾಜ್ಯದೊಂದಿಗೆ ವಿಲೀನಗೊಳಿಸಿದಾಗಿನಿಂದ, ನಮ್ಮ ಪಾರಂಪರಿಕ ಜಮೀನುಗಳನ್ನು ಕಬ್ಜ ಮಾಡುವ, ಕಸಿದುಕೊಳ್ಳುವ, ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಹೊರಗಿನ ದೊಡ್ಡ ದೊಡ್ಡ ಉದ್ಯಮ ಪತಿಗಳಿಗೆ, ಬಂಡವಾಳಶಾಹಿಗಳಿಗೆ ಗುತ್ತಿಗೆಗೆ ನೀಡುವುದರ ಮೂಲಕ ವ್ಯವಸ್ಥಿತ ಜನಸಂಖ್ಯಾ ಪಲ್ಲಟ ಕಂಡುಬಂದಿದೆ. ನಮ್ಮ ಪ್ರಗತಿ ಮತ್ತು ಜನಪದ ಸಂಸ್ಕಾರಗಳಿಗೆ ಸಂಬಂಧಿಸಿದ ಅಂತರ್ಗತ, ಜನ್ಮದತ್ತ ಮತ್ತು ಮೂಲಭೂತ ಹಕ್ಕುಗಳನ್ನು ಕರ್ನಾಟಕ ಸರ್ಕಾರದ ಆಡಳಿತಶಾಹಿ ಕಸಿದುಕೊಂಡಿತು. ಇದು ಸೂಕ್ಷ್ಮಾತಿಸೂಕ್ಷ್ಮ ಆದಿಮ ಸಂಜಾತ ಕೊಡವ ಜನಸಂಖ್ಯೆಯ ಮೇಲೆ ವಿಶಾಲ ಕರ್ನಾಟಕದ ಜನಾಂಗೀಯ ಪ್ರಾಬಲ್ಯ ಮತ್ತು ಬಹುಸಂಖ್ಯಾತ ಕೋಮುವಾದವನ್ನು ಹೇರಿದೆ. ಇದು ಸಂವಿಧಾನದ 7ನೇ ತಿದ್ದುಪಡಿಯಲ್ಲಿ ಕಲ್ಪಿಸಿದಂತೆ 1956 ರ ರಾಜ್ಯ ಮರುಸಂಘಟನೆ ಕಾಯಿದೆಯ ವ್ಯವಸ್ಥಿತ ಉಲ್ಲಂಘನೆಯಾಗಿದೆ. ಈ ನಡವಳಿಕೆಯು ವಿಶ್ವಾಸ ಘಾತುಕತನವಾಗಿದೆ. ನಂಬಿಕೆ ದ್ರೋಹದ ಅಕ್ಷಮ್ಯ ಅಪರಾಧವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ, ಕೊಡವ ಜನಾಂಗೀಯ ಅಸ್ತಿಭಾರ, ಕೊಡವ ನೆಲ, ಜಾನಪದ, ಭಾಷೆ, ಬಹುವಾರ್ಷಿಕ ಜಲಮೂಲಗಳು, ದೈವಿಕ ವನಗಳು, ಕೊಡವ ಅಭಯಾರಣ್ಯಗಳು, ಪವಿತ್ರ ಯಾತ್ರಾ ಸ್ಥಳಗಳು, ಸಾಂಸ್ಕೃತಿಕ ಹೆಗ್ಗುರುತು ಮತ್ತು ಅಸ್ತಿತ್ವ ಇದ್ಯಾವುದು ಸುರಕ್ಷಿತವಾಗಿಲ್ಲ. ಕೊಡವರ ಸ್ವಾಭಿಮಾನ ಮತ್ತು ನೈತಿಕ ಅಂತಃಸತ್ವ ಅಪಾಯದಲ್ಲಿದೆ. ಕರ್ನಾಟಕ ರಾಜ್ಯವು ಕೊಡವ ಪ್ರದೇಶವನ್ನು ಸಮಾನ ಪಾಲುದಾರ ಎಂದು ಪರಿಗಣಿಸದೆ ಕೇವಲ ಸಂಪನ್ಮೂಲ-ಉತ್ಪಾದಿಸುವ ಆಂತರಿಕ ವಸಾಹತು ಎಂದು ಪರಿಗಣಿಸಿದೆ, ಕೊಡವರನ್ನು ರಾಜ್ಯದ ಬಹುಸಂಖ್ಯಾತರ ಅಧೀನ ಪ್ರಜೆಗಳೆಂದು ಪರಿಗಣಿಸಲಾಗಿದೆ ಎಂದು ಟೀಕಿಸಿದ್ದಾರೆ. ಈ ರಾಜ್ಯ ಪ್ರಾಯೋಜಿತ ವರ್ಣಭೇದ ನೀತಿಯನ್ನು ಹೋಗಲಾಡಿಸಲು, ಕೊಡವ ಸ್ವಯಂ-ಆಡಳಿತ ಮತ್ತು ಆಂತರಿಕ ಸ್ವ-ನಿರ್ಣಯದ ಹಕ್ಕುಗಳನ್ನು ಸಂವಿಧಾನದಿಂದ ಗುರುತಿಸುವುದು ಒಂದೇ ಪರಿಹಾರವಾಗಿದೆ. ಕೊಡವ ಲ್ಯಾಂಡ್ ನಾದ್ಯಂತ ಇರುವ ಕೊಡವ ಬಂಧುಗಳು, ಸಹೋದರ ಸಹೋದರಿಯರು ಹಾಗೂ ಹೊರಗಿರುವ ಕೊಡವರು ಪವಿತ್ರ ತೀರ್ಥಯಾತ್ರೆಯಂತೆ ಪರಿಗಣಿಸಿ ಕೊಡವ ನ್ಯಾಷನಲ್ ಡೇಯಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.