ಮಡಿಕೇರಿ ನ.15 NEWS DESK : ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ಕೊಡಗಿನ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭರವಸೆ ನೀಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸದಾ ಶ್ರಮಿಸುವುದಾಗಿ ತಿಳಿಸಿದರು. ಕುಶಾಲನಗರದವರೆಗಿನ ರೈಲು ಮಾರ್ಗದ ಕಾಮಗಾರಿ ಕೂಡ ಸಧ್ಯದಲ್ಲೇ ಆರಂಭಗೊಳ್ಳಲಿದೆ. ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆಯ ಕುರಿತು ದೂರುಗಳು ಕೇಳಿ ಬಂದಿದೆ. ಜಿಲ್ಲೆಯಾದ್ಯಂತ ಟವರ್ ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಶೀಘ್ರ ನೆಟ್‍ವರ್ಕ್ ಸಮಸ್ಯೆ ಬಗೆಹರಿಯಲಿದೆ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು, ರಸ್ತೆ, ತಡೆಗೋಡೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಬದ್ಧನಾಗಿರುವುದಾಗಿ ತಿಳಿಸಿದರು.
::: ಮಾವುತರ ಸಮಸ್ಯೆಗೆ ಸ್ಪಂದನೆ :::
ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ಸಂಸದ ಯದುವೀರ್ ಅವರು ಮಾವುತರು ಹಾಗೂ ಕಾವಡಿಗರ ಸಮಸ್ಯೆಗಳನ್ನು ಆಲಿಸಿದರು. ಮನವಿಯನ್ನು ಸ್ವೀಕರಿಸಿದ ಅವರು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಸಂಸದರು ಸಾಕಾನೆಗಳಿಗೆ ಆಹಾರ ನೀಡಿದರು.
::: ಸಂಘಟನಾ ಪರ್ವ :::
ಬಿಜೆಪಿಯ ಮಡಿಕೇರಿ ಗ್ರಾಮಾಂತರ ಮಂಡಲದ ವತಿಯಿಂದ ನಡೆದ ಸಂಘಟನಾ ಪರ್ವ ಕಾರ್ಯಕ್ರಮಕ್ಕೆ ಗೋಪೂಜೆ ಮಾಡುವ ಮೂಲಕ ಸಂಸದರು ಚಾಲನೆ ನೀಡಿದರು. ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಪಕ್ಷ ಕಟ್ಟುವ ಮೂಲಕ ಸಶಕ್ತ ಭಾರತ ನಿರ್ಮಾಣ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದರು. ನಂತರ ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದರು. ನಂಜರಾಯಪಟ್ಟಣದ ಪುರಾತನ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದ ಯದುವೀರ್ ವಿಶೇಷ ಪೂಜೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ವಿವಿಧ ಮೋರ್ಚಾ, ಮಂಡಲಗಳ ಪದಾಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.