ಮಡಿಕೇರಿ ನ.16 NEWS DESK : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ಪುಸ್ತಕ ಪ್ರದರ್ಶನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕೊಡಗು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷರು, ನ್ಯಾಯಾವಾದಿ ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಮಣ್ಯ ಕಂಜರ್ಪಣೆ ಚಾಲನೆ ನೀಡಿದರು. ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ನವೆಂಬರ್, 20 ರವರೆಗೆ ಪುಸ್ತಕ ಪ್ರದರ್ಶನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದ್ದು, ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಕರೆ ನೀಡಿದರು. ‘ಪುಸ್ತಕಗಳ ಅಧ್ಯಯನದಿಂದ ಸಮಾಜದ ವಿಚಾರಗಳು ತಿಳಿಯಲಿದೆ. ಇದರಿಂದ ಪ್ರತಿಯೊಬ್ಬರ ಜ್ಞಾನ ಸಂಪತ್ತು ಹೆಚ್ಚಾಗಲಿದೆ. ಜೊತೆಗೆ ಭಾಷೆಯನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು. ಗ್ರಂಥಾಲಯದ ಸೌಲಭ್ಯಗಳನ್ನು ಸಹ ಪಡೆದುಕೊಳ್ಳುವಂತಾಗಬೇಕು ಸಲಹೆ ನೀಡಿದರು. ಒಳ್ಳೆಯ ಪುಸ್ತಕಗಳ ಅಧ್ಯಯನಕ್ಕೆ ಮುಂದಾಗಬೇಕು. ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗಿದ್ದರೂ ಸಹ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲಿ ಎಂದರು. ‘ಇಂದಿನ ಮೊಬೈಲ್ ಯುಗದಲ್ಲಿ ಹಲವು ವಿಚಾರಗಳನ್ನು ತಿಳಿದುಕೊಂಡರೂ ಸಹ ದಿನಪತ್ರಿಕೆ ಮತ್ತು ಪುಸ್ತಕ ಅಧ್ಯಯನದ ಮಹತ್ವ ಬೇರೆ ಎಂಬುದನ್ನು ಮರೆಯಬಾರದು, ಆ ನಿಟ್ಟಿನಲ್ಲಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಪುಸ್ತಕ ಅಧ್ಯಯನ ಒಳ್ಳೆಯದು ಎಂದು ಬಾಲಸುಬ್ರಹ್ಮಣ್ಯ ಪ್ರತಿಪಾದಿಸಿದರು.’ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಅವರು ಮಾತನಾಡಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಓದುಗರು ಬಳಸಿಕೊಳ್ಳುವಂತೆ ಕೋರಿದರು. ಗ್ರಂಥಾಲಯದಲ್ಲಿ ಸಾಹಿತಿಗಳು, ಕವಿಗಳ ಕಥೆ, ಕವನ, ಕಾದಂಬರಿಗಳು ಸೇರಿದಂತೆ ಹಲವು ಉತ್ತಮ ಅಧ್ಯಯನ ಪುಸ್ತಕಗಳಿದ್ದು, ಇವುಗಳನ್ನು ಬಳಸಿಕೊಳ್ಳುವಂತೆ ಕೋರಿದರು.