ಮಡಿಕೇರಿ NEWS DESK ನ.18 : ಕೊಡಗು ಜಿಲ್ಲೆಯ ವಿವಿಧ ದೇವಾಯಗಳಲ್ಲಿ ಕಳ್ಳತನ ಮಾಡಿದ ಆರೋಪದಡಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನ ಶನಿವಾರಸಂತೆ ಪಟ್ಟಣದ ಪೇಟೆ ರಾಮ ಮಂದಿರ ದೇವಸ್ಥಾನ ಮತ್ತು ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಸ್ಥಾನಗಳಲ್ಲಿ ಹುಂಡಿಯ ಹಣವನ್ನು ಕಳ್ಳತನ ಮಾಡಿದ ಆರೋಪದಡಿ ಅಂತರ್ ಜಿಲ್ಲಾ ಆರೋಪಿ ಹಾಸನ ನಗರದ ತಣ್ಣಿರುಹಳ್ಳ-ವಿಜಯನಗರ ನಿವಾಸಿ ಮುಬಾರಕ್ ಪಾಷ (34) ಎಂಬಾತನನ್ನು ಬಂಧಿಸಲಾಗಿದೆ. ಕೊಡಗು ಜಿಲ್ಲೆಯ ಶನಿವಾರವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿವಿಧ ದೇವಸ್ಥಾನಗಳ ಹುಂಡಿಯ ಹಣವನ್ನು ಕಳವು ಮಾಡಿದ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಗಂಗಾಧರಪ್ಪ ಆರ್.ವಿ, ಶನಿವಾರಸಂತೆ ಪೊಲೀಸ್ ಠಾಣೆಯ ಅಧಿಕಾರಿಗಳಾದ ರಾಜೇಶ್.ಕೆ, ಹೆಚ್.ಸಿ.ಗೋವಿಂದರಾಜು, ಚಂದ್ರ.ಹೆಚ್.ವೈ ಹಾಗೂ ಠಾಣೆಯ ಅಪರಾಧ ಪತ್ತೆ ದಳದ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿ ಹಾಸನ ನಗರದ ತಣ್ಣಿರುಹಳ್ಳ-ವಿಜಯನಗರ ನಿವಾಸಿ ಮುಬಾರಕ್ ಪಾಷ (34), ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಕೃತ್ಯಕ್ಕೆ ಬಳಸಿದ್ದ ದ್ವಿ-ಚಕ್ರ ವಾಹನ, ರೂ.30,777, ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ರಾಡ್‌ಗಳನ್ನು ವಶಪಡಿಸಲಾಗಿದೆ. ಆರೋಪಿಯ ವಿರುದ್ಧ ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡು ತನ್ನ ಚಾಳಿಯನ್ನು ಮುಂದುವರಿಸಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.