ಮಡಿಕೇರಿ ನ.20 NEWS DESK : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಸಂಸ್ಥಾಪಕರುಗಳಾದ ದಿವಂಗತ ನಂದಾ ಗಣಪತಿ ಹಾಗೂ ಕಾಂತಿ ಗಣಪತಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್.ಸುದೇಶ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಧನಲಕ್ಷ್ಮಿ ಕಾವೇರಿ ಶಾಲೆಯ ಸಂಸ್ಥಾಪಕರುಗಳೊಂದಿಗೆ ಸೇವೆ ಸಲ್ಲಿಸಿದ ಸುದೀರ್ಘ 25 ವರ್ಷಗಳನ್ನು ನೆನೆದು ಭಾವುಕರಾದರು. ಕಾವೇರಿ ಶಾಲೆಯ ಕಾರ್ಯದರ್ಶಿ ಪಿ.ಎನ್.ವಿನೋದ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆಯ ಗುರಿ ಹಾಗೂ ಪ್ರಸಿದ್ಧ ವ್ಯಕ್ತಿಯಾಗಲು ಇರಬೇಕಾದ ಚಾಣಾಕ್ಷತೆಯನ್ನು ಬೆಳೆಸಿಕೊಳ್ಳುವ ರೀತಿಯನ್ನು ಸಣ್ಣ ಕಥೆಯ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ 2024-25ನೇ ಶೈಕ್ಷಣಿಕ ವರ್ಷದ ಚುನಾಯಿತ ಪದಾಧಿಕಾರಿಗಳಿಗೆ ಪೋಷಕರ ಉಪಸ್ಥಿತಿಯಲ್ಲಿ ಅತಿಥಿಗಳು ಪದವಿ ಪ್ರದಾನ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಶಾಲೆಯ ಬಗ್ಗೆ ಸಾಮೂಹಿಕ ಗೀತೆ ಹಾಡಲಾಯಿತು. 2024 -25ರ ಸಾಲಿನ ಕಾವೇರಿ ಶಾಲೆಯ ಆಯೋಜಕತ್ವದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಸಹಾಯ ಹಸ್ತ ನೀಡಿದ ಶಿಕ್ಷಕರಿಗೆ ಪೋಷಕರಿಗೆ ನೆನಪಿನ ಕಾಣಿಕೆಯನ್ನು ಶಾಲಾ ಆಡಳಿತ ಮಂಡಳಿಯವರು ನೀಡಿದರು. ಕಾವೇರಿ ಶಾಲೆ ಆಡಳಿತ ಮಂಡಳಿಯವರು, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯರುಗಳು, ಪ್ರಾಥಮಿಕ ವಿಭಾಗದ ಸಂಯೋಜಿಕಿ ಅಮೃತ ಅರ್ಜುನ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಕಾವೇರಿ ಶಾಲೆಯ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಬಿ.ಎಸ್.ಜ್ಯೋತಿ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಕಲ್ಪ ಹಾಗೂ ಹರಿತ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಯು.ಪಿ.ಪಾರ್ವತಿ ವಂದಿಸಿದರು.