ಮಡಿಕೇರಿ ನ.21 NEWS DESK : ಮಡಿಕೇರಿಯಲ್ಲಿರುವ ರಾಜರ ಗದ್ದುಗೆಗೆ ಸೇರಿದ 19.86 ಎಕರೆ ಜಾಗದ ಪೈಕಿ ಒತ್ತುವರಿಯಾಗಿರುವ 1.18 ಎಕರೆ ಜಾಗವನ್ನು ತೆರವುಗೊಳಿಸುವಂತೆ ಸರ್ಕಾರದ ಹೊರಡಿಸಿರುವ ಆದೇಶದನ್ವಯ ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಒತ್ತುವರಿ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಸ್ವತ: ಸರ್ಕಾರವೇ ಆದೇಶ ಹೊರಡಿಸಿ 28 ಮಂದಿಯಿಂದ ಒತ್ತುವರಿಯಾಗಿರುವ 1.18 ಎಕರೆ ಜಾಗವನ್ನು ತೆರವುಗೊಳಿಸಿ ರಾಜರ ಗದ್ದುಗೆಯ ಜಾಗವನ್ನು ಸಂರಕ್ಷಿಸುವಂತೆ 2024 ನ.4ರಂದು ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಈ ಆದೇಶದಂತೆ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲು ವೀರಶೈವ ಮಹಾಸಭಾ ಚಿಂತನೆ ನಡೆಸಲಿದೆ ಎಂದರು. ಸರ್ಕಾರದ ಆದೇಶದಲ್ಲಿ 1.18 ಎಕರೆ ಪ್ರದೇಶದ ಒತ್ತುವರಿಯನ್ನು ಮಾತ್ರ ಉಲ್ಲೇಖಿಸಲಾಗಿದೆ. ಆದರೆ ರಾಜರ ಗದ್ದುಗೆಗೆ ಸೇರಿದ 19.86 ಎಕರೆ ಜಾಗದಲ್ಲಿ ಇನ್ನೂ ಹೆಚ್ಚಿನ ಜಾಗ ಒತ್ತುವರಿಯಾಗಿದೆ. ಸರ್ಕಾರದ ಆದೇಶದ ಪ್ರಕಾರ 1.18 ಎಕರೆ ಮಾತ್ರವಲ್ಲದೆ ನ್ಯಾಯಾಲಯದ ಆದೇಶದಂತೆ ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ತೆರವುಗೊಳಿಸಬೇಕು. ರಾಜರ ಗದ್ದುಗೆ, ಗದ್ದುಗೆಗೆ ಸೇರಿದ ಜಾಗವನ್ನು ಸಂರಕ್ಷಿಸುವ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಹೆಚ್.ವಿ.ಶಿವಪ್ಪ ಒತ್ತಾಯಿಸಿದರು. ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
::: ಪ್ರತಿಭಾ ಪುರಸ್ಕಾರ :::
ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಡಿ.22 ರಂದು ಕ್ರೀಡಾಕೂಟ ಮತ್ತು ಡಿ.25 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕುಶಾಲನಗರದಲ್ಲಿ ಹಮ್ಮಿಕೊಂಡಿರುವುದಾಗಿ ಹೆಚ್.ವಿ.ಶಿವಪ್ಪ ಅವರು ಇದೇ ಸಂದರ್ಭ ತಿಳಿಸಿದರು. ಕುಶಾಲನಗರದ ಸರ್ಕಾರಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ಮತ್ತು ಎಪಿಎಂಸಿ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ಡಿ.5ರೊಳಗೆ ಅಗತ್ಯ ದಾಖಲಾತಿಗಳ ಪ್ರತಿಯೊಂದಿಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು. ಸಮಾರಂಭದಲ್ಲಿ ಹಿರಿಯ ಸಾಧಕರನ್ನು ಸನ್ಮಾನಿಸಲಾಗುವುದು, ಅಲ್ಲದೆ ವೀರಶೈವ ಸಮುದಾಯದ ಮಹನೀಯರ ಜಯಂತಿ ಹಾಗೂ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಯ್ಯ, ಉಪಾಧ್ಯಕ್ಷರಾದ ಹೆಚ್.ಜೆ.ಪ್ರವೀಣ್, ಎಸ್.ಎಸ್.ಸುರೇಶ್, ನಿರ್ದೇಶಕ ಟಿ.ಮಹದೇವಪ್ಪ ಹಾಗೂ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಬಿ.ಆದರ್ಶ್ ಉಪಸ್ಥಿತರಿದ್ದರು.