ಮಡಿಕೇರಿ ನ.21 NEWS DESK : ಭಾಗಮಂಡಲ ನಾಡು ಗೌಡ ಒಕ್ಕೂಟದ ವತಿಯಿಂದ ಗೌಡ ಜನಾಂಗದ ಕುಟುಂಬಗಳ ನಡುವಣ ಪ್ರಥಮ ವರ್ಷದ ಹಗ್ಗಜಗ್ಗಾಟ ಸ್ಪರ್ಧೆ ‘ಹುತ್ತರಿ ಕಪ್-2024’ ನ್ನು ಡಿ.13 ರಂದು ಆಯೋಜಿಸಲಾಗಿದೆಯೆಂದು ಒಕ್ಕೂಟದ ಅಧ್ಯಕ್ಷರಾದ ಕಿಶೋರ್ ಕುದುಕುಳಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿತ ಹಗ್ಗಜಗ್ಗಾಟ ಸ್ಪರ್ಧೆ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ನಡೆಯಲಿದೆ. ಪುರುಷರ ತಂಡದ ಒಟ್ಟು ತೂಕ 640 ಕೆ.ಜಿ. ಮೀರಬಾರದು ಮತ್ತು ಗರಿಷ್ಠ 10 ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ ತಂಡದ ಒಟ್ಟು ತೂಕ 540 ಕೆ.ಜಿ.ಮತ್ತು ಗರಿಷ್ಠ 10 ಆಟಗಾರರನ್ನು ಮೀರಬಾರದೆಂದು ಆಟದ ನಿಯಮಗಳನ್ನು ವಿವರಿಸಿದರು. ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯ ವಿಜೇತರಿಗೆ 20 ಸಾವಿರ ರೂ., ಟ್ರೋಫಿ ಮತ್ತು ಪದಕಗಳನ್ನು ನೀಡಲಾಗುತ್ತದೆ. ದ್ವಿತೀಯ 20 ಸಾವಿರ ರೂ., ಟ್ರೋಫಿ ಮತ್ತು ಪದಕ. ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ. ಟ್ರೋಫಿ ಮತ್ತು ಪದಕ, ದ್ವಿತೀಯ 6 ಸಾವಿರ ರೂ., ಟ್ರೋಫಿ ಮತ್ತು ಪದಕವನ್ನು ನೀಡಲಾಗುತ್ತದೆ. ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗು ಬಹುಮಾನಗಳಿರುತ್ತದೆ. ಪಾಲ್ಗೊಂಡ ಎಲ್ಲಾ ತಂಡಗಳಿಗು ಸ್ಮರಣಿಕೆಯನ್ನು ನೀಡಲಾಗುತ್ತದೆಂದು ಮಾಹಿತಿ ನೀಡಿದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಕ್ಕೆ 1500 ರೂ. ಮತ್ತು ಮಹಿಳೆಯರ ವಿಭಾಗಕ್ಕೆ 1 ಸಾವಿರ ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಡಿ.15ರ ಒಳಗಾಗಿ ಪುರುಷರ ವಿಭಾಗದಲ್ಲಿ ಮೊದಲು ನೋಂದಾಯಿಸಿಕೊಂಡ 50 ತಂಡಗಳಿಗೆ ಮತ್ತು ಮಹಿಳೆಯರ ವಿಭಾಗದಲ್ಲಿ 30 ತಂಡಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಕ್ಕೂಟದ ನಿರ್ದೇಶಕರಾದ ಚೇತನ್ ಕೂಡಕಂಡಿಯವರ ಬಳಿ (ಮೊ.8722278910) ಪ್ರವೇಶ ಶುಲ್ಕದೊಂದಿಗೆ ತಂಡದ ಹೆಸರು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಚಲನ್ ನಿಡ್ಯಮಲೆ. ಸಹ ಕಾರ್ಯದರ್ಶಿ ಚೇತನ್ ಕೂಡಕಂಡಿ, ನಿರ್ದೇಶಕರುಗಳಾದ ಕೋಳಿಬೈಲು ಸುರೇಂದ್ರ, ಕಲ್ಪನ ಹೊಸಗದ್ದೆ, ಸುಧೀರ್ ಕುಮಾರ್ ಹೊದ್ದೆಟ್ಟಿ, ಪವನ್ ಸುಳ್ಯಕೋಡಿ ಉಪಸ್ಥಿತರಿದ್ದರು.