ನಾಪೋಕ್ಲು ನ.21 NEWS DESK : ಮಡಿಕೇರಿ ತಾಲ್ಲೂಕು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ “ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ” ಎಂಬ ವಿಷಯದ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನಡೆಯಿತು. ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸಹಕಾರ ಸಂಘಗಳ ಪಾತ್ರ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮವಾಗಿ ವಿಷಯ ಮಂಡನೆ ಮಾಡಿದರು. ಸ್ಪರ್ಧಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ಹಾಗೂ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅಶೋಕ ಪೆರುಮುಂಡ, ನಿರ್ದೇಶಕರುಗಳಾದ ಪ್ರಮೀಳಾ ಬಂಗಾರಕೋಡಿ, ಪುಷ್ಪಾವತಿ ಯಾಪಾರೆ, ಎನ್.ವಿ.ಶೇಷಪ್ಪ, ಪಿ.ಟಿ.ಜಯರಾಮ, ಗ್ರಾ.ಪಂ ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸದಸ್ಯರು ಹಾಜರಿದ್ದರು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಜ್ಯೋತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್, ಕಂಪ್ಯೂಟರ್ ಶಿಕ್ಷಕಿ ಚಂದ್ರಮತಿ ಕುಂಬಳಚೇರಿ, ಸಂಸ್ಥೆಯ ಆಂತರಿಕ ಲೆಕ್ಕಪರಿಶೋಧಕ ರತ್ನಾಕರ ಗೌಡ ಬಳ್ಳಡ್ಕ ಸಹಕಾರ ನೀಡಿದರು.
ವರದಿ : ದುಗ್ಗಳ ಸದಾನಂದ.