ಮಡಿಕೇರಿ ನ.22 NEWS DESK : ಭಾರತ ದೇಶ ಕಂಡ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆ ಮೂಲಕ ಭಾರತೀಯ ಸೇನೆಯ ಪಿತಾಮಹ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಲಾಗಿದೆ. ಇದು ಕೊಡಗು ಮಾತ್ರವಲ್ಲದೆ ಇಡೀ ದೇಶದ ಜನರಿಗೆ ನೋವನ್ನುಂಟು ಮಾಡಿದೆ. ಭಾರತೀಯ ಸೇನೆಯ ಬಗ್ಗೆ ಗೌರವವಿಲ್ಲದ ದೇಶದ್ರೋಹಿ ವೀರ ಸೇನಾನಿಗಳ ಬಗ್ಗೆ ಕೇವಲವಾಗಿ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿಶ್ವದ ಗಮನ ಸೆಳೆದಿದ್ದ ಇಬ್ಬರು ವೀರ ಸೇನಾಧಿಕಾರಿಗಳ ಬಗ್ಗೆ ಅವಹೇಳನ ಮಾಡಿರುವುದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಿಡಿಗೇಡಿಯನ್ನು ಕೊಡಗು ಜಿಲ್ಲಾ ಪೊಲೀಸರು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೊಳ್ಳಜಿರ ಅಯ್ಯಪ್ಪ ಒತ್ತಾಯಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿದ ಕೇವಲ ಇಬ್ಬರು ಸೇನಾಧಿಕಾರಿಗಳಲ್ಲಿ ಕಾರ್ಯಪ್ಪನವರು ಒಬ್ಬರಾಗಿದ್ದಾರೆ. ಸೇನಾಪಡೆಯ ಹೀರೋ ಎಂದೇ ಖ್ಯಾತರಾಗಿರುವ ಕಾರ್ಯಪ್ಪನವರು, ವಸಾಹತುಶಾಹಿ ಆಡಳಿತದಡಿಯಲ್ಲಿದ್ದ ಭಾರತೀಯ ಸೇನೆಯನ್ನು ಸ್ವತಂತ್ರ ಭಾರತದ ಸೇನೆಯಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಯಪ್ಪ ಮಿಲಿಟರಿ ವೃತ್ತಿಜೀವನದ ಹುದ್ದೆಗಳಲ್ಲಿ ಮೇಲೇರುತ್ತಾ, 1923ರಲ್ಲಿ ಲೆಫ್ಟಿನೆಂಟ್ ಆದರು. 1927ರಲ್ಲಿ ಕ್ಯಾಪ್ಟನ್ ಆದರು, 1942ರಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಆಗಿ, 1946ರಲ್ಲಿ ಬ್ರಿಗೇಡಿಯರ್ ಹುದ್ದೆಗೇರಿದರು. ಬ್ರಿಟಿಷ್ ಆಡಳಿತದಡಿ ಕಾರ್ಯನಿರ್ವಹಿಸುವಾಗ, ಕಾರ್ಯಪ್ಪನವರು ಮಧ್ಯ ಪೂರ್ವ (1941-1942), ಬರ್ಮಾ (ಇಂದಿನ ಮಯನ್ಮಾರ್, 1943-1944) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. 1942ರಲ್ಲಿ, ಕಾರ್ಯಪ್ಪನವರು ಸೇನಾಪಡೆಯ ನೇತೃತ್ವ ವಹಿಸಿದ ಮೊದಲ ಭಾರತೀಯ ಅಧಿಕಾರಿ ಎನಿಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ, ಅವರನ್ನು ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ ಸದಸ್ಯನನ್ನಾಗಿ ನೇಮಿಸಿ, ಗೌರವಿಸಲಾಯಿತು. 1947ರಲ್ಲಿ ಭಾರತ ಸ್ವತಂತ್ರಗೊಳ್ಳುವ ಮೊದಲು ನಡೆದ ಭಾರತ – ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ, ಎರಡು ಹೊಸ ದೇಶಗಳಿಗೆ ಸೇನಾಪಡೆಗಳನ್ನು ವಿಭಜಿಸುವ ಸವಾಲಿನ ಜವಾಬ್ದಾರಿಯೂ ಕಾರ್ಯಪ್ಪನವರದಾಗಿತ್ತು. ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಡೆಹ್ರಾ ಡೂನ್‍ನ ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು. ನಂತರ ಅವರು ಕೊರಿಯಾದಲ್ಲಿ ತಟಸ್ಥ ರಾಷ್ಟ್ರಗಳ ವಾಪಸಾತಿ ಆಯೋಗದಲ್ಲಿ ಭಾಗವಹಿಸಲು ವಿಶ್ವಸಂಸ್ಥೆಯಿಂದ ಆಯ್ಕೆಯಾದರು. ತಟಸ್ಥ ರಾಷ್ಟ್ರಗಳ ವಾಪಸಾತಿ ಆಯೋಗದ ಕಾರ್ಯದ ಯಶಸ್ಸಿನ ನಂತರ, ಅವರು ಭಾರತಕ್ಕೆ ಹಿಂದಿರುಗಿದರು. 1953 ರಲ್ಲಿ ಲೆಫ್ಟಿನೆಂಟ್-ಜನರಲ್ ಶ್ರೇಣಿಯೊಂದಿಗೆ ದಕ್ಷಿಣ ಕಮಾಂಡ್‍ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಬಡ್ತಿ ಪಡೆದರು. 1 ನೇ ಜನವರಿ 1949 ರಿಂದ ಮೇ 8 1961 ರವರೆಗೆ ಕುಮಾನ್ ರೆಜಿಮೆಂಟ್‍ನ ಮೊದಲ ಭಾರತೀಯ ಕರ್ನಲ್ ಆದರು. 1957 ರಂದು ಆರ್ಮಿ ಸ್ಟಾಫ್‍ನ 6 ನೇ ಮುಖ್ಯಸ್ಥರಾಗಿ ಭಾರತೀಯ ಸೇನೆಯ ಉಸ್ತುವಾರಿ ವಹಿಸಿಕೊಂಡರು. 35 ವರ್ಷಗಳ ವಿಶಿಷ್ಟ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ಅವರು 1961 ರಲ್ಲಿ ಸೈನ್ಯದಿಂದ ನಿವೃತ್ತರಾದರು. ಸೈನಿಕರ ಸೇನಾನಿ, ಜನರಲ್ ಗಳ ಜನರಲ್ ಎಂದೇ ಖ್ಯಾತಿ ಗಳಿಸಿದ್ದ ಅಸಾಮಾನ್ಯ ಸೇನಾನಿ ಜನರಲ್ ತಿಮ್ಮಯ್ಯ ಅವರು ರಾಷ್ಟ್ರಕ್ಕೆ ನೀಡಿದ ಅತ್ಯುತ್ತಮ ಸೇವೆಗಾಗಿ 1954 ರಲ್ಲಿ “ಪದ್ಮ ಭೂಷಣ” ಪ್ರಶಸ್ತಿಯನ್ನು ಪಡೆದರು. ಈ ಇಬ್ಬರು ಮಹಾನ್ ಸೇನಾನಿಗಳ ಮಹಾ ಸಾಧನೆಯ ಬಗ್ಗೆ ಅರಿವಿಲ್ಲದೆ ಕಿಡಿಗೇಡಿಗಳು ಅವಹೇಳನ ಮಾಡಿರುವುದನ್ನು ಕೊಡವ ಮಕ್ಕಡ ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.