ಮಡಿಕೇರಿ NEWS DESK ನ.23 : ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆಯ ಮೂಲಕ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಳ್ಯ ತಾಲ್ಲೂಕಿನ ಹಾಲೆಟ್ಟಿ ಗ್ರಾಮದ ನಿವಾಸಿ, ವಕೀಲ ವೃತ್ತಿಯಲ್ಲಿ ತೊಡಗಿರುವ ವಿದ್ಯಾಧರ ಗೌಡ (66) ಬಂಧಿತ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ಹೇಳಿದರು. ಇಡೀ ದೇಶವೇ ಗೌರವ ತೋರುವ ಸೇನಾ ನಾಯಕರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಕುರಿತು ಗ್ರೂಪ್ ನ ಅಡ್ಮಿನ್ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ. ಗ್ರೂಪ್‌ನಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಮತ್ತು ಅವಾಚ್ಯ ಸಂದೇಶಗಳನ್ನು ರವಾನಿಸದಂತೆ ಗ್ರೂಪ್ ನಲ್ಲಿರುವ ಎಲ್ಲರಿಗೂ ಸೂಕ್ತ ತಿಳುವಳಿಕೆ ನೀಡುವಂತೆ ತಿಳಿಸಲಾಗಿದೆ. ಅಲ್ಲದೆ ಈ ರೀತಿಯ ಸಂದೇಶಗಳನ್ನು ಹಂಚಿಕೊಂಡವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ವೀರ ಸೇನಾನಿಗಳ ಬಗ್ಗೆ ಅವಾಚ್ಯವಾಗಿ ಸಂದೇಶ ರವಾನಿಸಿದ್ದ ಆರೋಪಿಯ ಪತ್ತೆಗಾಗಿ ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್.ಕೆ, ಸುಂಟಿಕೊಪ್ಪ ಪಿಎಸ್‌ಐ ಚಂದ್ರಶೇಖರ್ ಹೆಚ್.ವಿ, ಅಪರಾಧ ಪತ್ತೆ ಹಾಗೂ ತಾಂತ್ರಿಕ ಸಿಬ್ಬಂದಿಗಳ ಒಳಗೊಂಡಂತೆ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ದಕ್ಷತೆಯನ್ನು ಎಸ್‌ಪಿ ಕೆ.ರಾಮರಾಜನ್ ಶ್ಲಾಘಿಸಿದರು.
::: ಕಠಿಣ ಕ್ರಮ :::
ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂದೇಶ, ಭಾವಚಿತ್ರ, ವಿಡಿಯೋ ಹಂಚಿಕೊಳ್ಳುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳಬೇಕು. ಕೊಡಗು ಜಿಲ್ಲಾ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾವಹಿಸಿದೆ. ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಸುಳ್ಳು ಸುದ್ದಿಯ ಪೋಸ್ಟ್ಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುವ ಮತ್ತು ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಇದೇ ಸಂದರ್ಭ ಎಚ್ಚರಿಕೆ ನೀಡಿದರು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳ ಕುರಿತು ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.











