ಮಡಿಕೇರಿ ನ.27 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಭಾರತ ಸಂವಿಧಾನದ ಪ್ರಸ್ತಾವನೆಯ ಪ್ರತಿಗೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಸಂವಿಧಾನದ ತತ್ವ ಮತ್ತು ಆಶಯಗಳನ್ನು ಸಾಕಾರಗೊಳಿಸುವಲ್ಲಿ ತನ್ನನ್ನು ತಾನು ಪರಮರ್ಶೆ ಮಾಡಿಕೊಳ್ಳಲು ಇದು ಸುದಿನ ಎಂದರು. “ಭಾರತ ಸಂವಿಧಾನವು ರಚನಾ ಸಭೆಯು ಅನುಮೋದಿಸಿರುವ ಒಂದು ದಾಖಲೆ ಮಾತ್ರ ಅಲ್ಲ ಅದು ಯಾರನ್ನು ಪ್ರತಿನಿಧಿಸುತ್ತದೆಯೋ ಅವರ ಮೂಲದಿಂದಲೇ ಬಂದ ಸನ್ನದು” ಎಂಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೇಳಿಕೆಯನ್ನು ಸ್ಮರಿಸುತ್ತಾ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಧರ್ಮ, ಏಕತೆ, ಭ್ರಾತೃತ್ವ, ಶಿಕ್ಷಣ, ಸ್ವತಂತ್ರ ಭಾರತದ ಸಂವಿಧಾನದಲ್ಲಿನ ಪ್ರಮುಖ ಮೌಲ್ಯಗಳು, ಮೂಲಭೂತ ಹಕ್ಕುಗಳೊಂದಿಗೆ ಮೂಲಭೂತ ಕರ್ತವ್ಯಗಳು ಕೂಡ ಬಹುಮುಖ್ಯ, ದೇಶದ ಸಂಪನ್ಮೂಲಗಳನ್ನು ಕಾಪಾಡುವುದು, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಗೌರವಿಸುವುದು, ಸರ್ಕಾರದ ನಿಯಮಗಳನ್ನು ಪಾಲಿಸುವುದು, ಸಂವಿಧಾನದ ಆದರ್ಶಗಳನ್ನು ಪಾಲಿಸುವುದು ಹಾಗೂ ಇತರೆ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಭಾರತಕ್ಕೊಂದು ಉತ್ತಮ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಚನಾ ಸಮಿತಿಯ ಸದಸ್ಯರುಗಳನ್ನು ಹಾಗೂ ಸ್ವತಂತ್ರ ಹೋರಾಟಗಾರರನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು. ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ, ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗ ಹೇಗಿರಬೇಕು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಎಂದೆಲ್ಲ ಸೂಚನೆಗಳನ್ನು ಹಾಕಿ ಕೊಟ್ಟ ಸಮಗ್ರ ಮಾಹಿತಿಗಳ ಆಗರ ನಮ್ಮ ಸಂವಿಧಾನ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಗಾಯಿತ್ರಿ ದೇವಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಇ.ತಿಪ್ಪೇಸ್ವಾಮಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಪಿ.ಕೃಷ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಹದೇವಯ್ಯ, ಹಿಂದಿ ವಿಭಾಗದ ಮುಖ್ಯಸ್ಥ ಬಿ.ಹೆಚ್.ತಳವಾರ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಎನ್.ರವಿಶಂಕರ್, ರಾಜ್ಯಶಾಸ್ತ್ರ ಉಪನ್ಯಾಸಕರಾದ ನಿವ್ಯ, ಡೀನ ಹಾಗೂ ಇನ್ನಿತರ ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ರಾಜ್ಯಶಾಸ್ತ್ರದ ಉಪನ್ಯಾಸಕರಾದ ಡಾ. ಕೆ.ಎಸ್.ಶೃಂಗಾರ್ ನಿರೂಪಣೆ ಮಾಡುವುದರ ಮೂಲಕ ಸಂವಿಧಾನದ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಸಂವಿಧಾನದ ಅರಿವನ್ನು ಮೂಡಿಸಲಾಯಿತು.