ಮಡಿಕೇರಿ ನ.27 NEWS DESK : ಶ್ರೀ ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ಸ್ಥಾಪಕರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಚೇರಂಗಾಲ ಗ್ರಾಮದ ಮೊಟ್ಟನ ಸಿ.ರವಿಕುಮಾರ್ ಅವರು ಇಲ್ಲಿನ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ ಈ ದೇಣಿಗೆಯನ್ನು ನೀಡಲಾಗಿದೆ. ಕಾಲೇಜಿನ ಪಿ.ಯು.ಸಿ ವಿಭಾಗದ ಒಟ್ಟು 12 ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ವೆಚ್ಚವನ್ನು ಭರಿಸಲು ಈ ನೆರವನ್ನು ನೀಡಲಾಗಿದೆ. ಶ್ರೀ ಕಾವೇರಿ ವಿದ್ಯಾ ಸಂಘದ ನಿರ್ದೇಶಕರಾದ ಕುಯ್ಯಮುಡಿ ಮನೋಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮೊಟ್ಟನ ಸಿ. ರವಿಕುಮಾರ್ ಅವರ ಉದಾರತೆಯನ್ನು ಶ್ಲಾಘಿಸಿ, ಕಳೆದ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು. ಈ ರೀತಿಯ ಪ್ರೋತ್ಸಾಹ ಧನವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಸ್ಪೂರ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಸಂಜೆ ನಾಲ್ಕು ಗಂಟೆ ನಂತರವೂ ವಿದ್ಯಾರ್ಥಿಗಳಿಗೆ ಅಭ್ಯಾಸಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ಈ ಸಂದರ್ಭ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಈ ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ 6 ವಿದ್ಯಾರ್ಥಿಗಳಿಗೆ ಅವರವರ ಪೋಷಕರಿಂದಲೇ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಪೋಷಕರು ಹಾಜರಿದ್ದರು. ಎ.ಈ.ಶರತ್ ಪ್ರಾರ್ಥಿಸಿದರು. ಎ.ಆರ್.ವೇದಾವತಿ ಮತ್ತು ಕೆ.ಜಿ.ಡಿಂಪಲ್ ನಿರೂಪಿಸಿ, ಎಂ.ಜೆ.ಕನ್ನಿಕ ವಂದಿಸಿದರು.