ಮಡಿಕೇರಿ ನ.28 NEWS DESK : ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವಿರಾಜಪೇಟೆ ತಾಲ್ಲೂಕು ಘಟಕ, ಕಡಂಗ ಕೆ.ಡಿ.ಎಸ್.ಮುಸ್ಲಿಂ ಯೂತ್ ಚಾರಿಟಿಯ ಜಂಟಿ ಆಶ್ರಯದಲ್ಲಿ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆಯ ಸಹಯೋಗದೊಂದಿಗೆ ಡಿ.1 ರಂದು ಕಡಂಗದಲ್ಲಿ ಎರಡನೇ ವರ್ಷದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂನ ವಿರಾಜಪೇಟೆ ತಾಲ್ಲೂಕು ಘಟಕದ ಕೋಶಾಧಿಕಾರಿ ಅಶ್ರಫ್ ಸಿ.ಎ, ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳವಂತೆ ಮನವಿ ಮಾಡಿದರು. ಶಿಬಿರ ಪ್ರಮುಖವಾಗಿ ಸ್ತ್ರೀ ರೋಗ ಮತ್ತು ಪ್ರಸೂತಿ, ದಂತ ಚಿಕಿತ್ಸೆ, ವೈದ್ಯಕೀಯ ತಜ್ಞರ ಸಮೀಕ್ಷೆ ಮತ್ತು ಶಸ್ತ್ರ ಚಿಕತ್ಸೆ-ಆರೋಗ್ಯ ತಪಾಸಣೆ ಈ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಮುಟ್ಟಿನ ಸಮಸ್ಯೆ, ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಮಹಿಳೆಯರ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ದಂತ ಚಿಕಿತ್ಸಾ ವಿಭಾಗದಲ್ಲಿ ವಸಡು ಮತ್ತು ಹಲ್ಲು ನೋವು, ಅಸಮರ್ಪಕ ಸ್ಥಾನದಲ್ಲಿರುವ ಕಿಕ್ಕಿರಿದ ಹಲ್ಲುಗಳ ಮರು ಜೊಡಣೆ, ರೂಟ್ ಕೆನಾಲ್, ಅಂತರದಲ್ಲಿರುವ ಹಲ್ಲುಗಳನ್ನು ಸರಿಪಡಿಸುವುದು, ಹಲ್ಲುಕಟ್ಟುವುದು, ಸೌಂದರ್ಯ ದಂತ ಚಿಕಿತ್ಸೆ ಸೇರಿದಂತೆ ಎಲ್ಲಾ ಸಾಮನ್ಯ ದಂತ ಚಿಕಿತ್ಸೆ ನಡೆಯಲಿದೆ ಎಂದರು. ವೈದ್ಯಕೀಯ ತಜ್ಞರ ಸಮೀಕ್ಷೆ ವಿಭಾಗದಲ್ಲಿ ಬಿ.ಪಿ, ಸಕ್ಕರೆ ಕಾಯಿಲೆ, ಹೃದ್ರೋಗ, ಥೈರಾಯ್ಡ್, ಶ್ವಾಸಕೋಶದ ತೊಂದರೆ, ದಮ್ಮು, ರಕ್ತಹೀನತೆ, ನಿಶ್ಶಕ್ತಿ ಮತ್ತು ಇತರೆ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆ ವಿಭಾಗದಲ್ಲಿ ಸಾಮಾನ್ಯ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ, ಅಪೆಂಡಿಸೈಟಿಸ್, ಪಿತ್ತಕೋಶದ ಕಲ್ಲು, ದೀರ್ಘ ಕಾಲದ ಹೊಟ್ಟೆನೋವು, ಪೈಲ್ಸ್ ಮೊದಲಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಉಚಿತ ಇಸಿಜಿ ಮತ್ತು ಔಷಧಿಗಳ ಸೌಲಭ್ಯ ಕಲ್ಪಿಸಲಾಗಿದೆಯೆಂದರು. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು ಸಿ.ಎ.ರಜಾಕ್ 9482616835, ಪಿ.ಎಂ.ಸೌಕತ್ 9380285078 ಸೈಫುದ್ದಿನ್ ಚಾಮಿಯಾಲ, 9740326368 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮನ್ನು ವಿರಾಜಪೇಟೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವಿರಾಜಪೇಟೆ ತಾಲ್ಲೂಕಿನ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮ್ಮೆಂಟ್ ಫೋರಂನ ಅಧ್ಯಕ್ಷ ಸಿ.ಎ.ಫತಾಯಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಐಎಂಡಿಎಫ್ ರಾಷ್ಟ್ರೀಯ ಅಧ್ಯಕ್ಷ ನಸೀರ್ ಅಹ್ಮದ್, ನಾಪೋಕ್ಲು ಸೇವ್ ದಿ ಡ್ರೀಮ್ಸ್ ಚಾರಿಟಿಯ ಜಾಬಿರ್ ನಿಜಾಮಿ, ಎಐಎಂಡಿಎಫ್ ರಾಷ್ಟ್ರೀಯ ಸಮಿತಿ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಜಿಪ, ನರಿಯಂದಡ ಗ್ರಾ.ಪಂ ಅಧ್ಯಕ್ಷರಾದ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ, ಕಡಂಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ಕಡಂಗ ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿ ಅಧ್ಯಕ್ಷ ಸಿ.ಎ.ಜುನೈದ್, ಎಐಎಂಡಿಎಫ್ ಅಧ್ಯಕ್ಷ ಶರೀಫ್, ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ಮೊಹಮ್ಮದ್ ಕೊಟ್ಟಮುಡಿ, ಅಲ್ ಅನ್ಸಾರ್ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಸುಹೈಲ್ ಮುಕ್ರಂ, ವ್ಯವಸ್ಥಾಪಕ ಅಬ್ದುಲ್ ಕಲ್ಲಕ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ, ವಿರಾಜಪೇಟೆ ಪ.ಪಂ. ಸದಸ್ಯ ಮೊಹಮ್ಮದ್ ರಾಫಿ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಸಿರ್, ಕಡಂಗ ಬದ್ರಿಯಾ ಮಸೀದಿ ಅಧ್ಯಕ್ಷ ಕೆ.ಇ.ಉಸ್ಮಾನ್ ಸೇರಿದಂತೆ ನಿವೃತ್ತ ಸೈನಿಕರು, ಗ್ರಾ.ಪಂ ಸದಸ್ಯರು, ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ಅಶ್ರಫ್ ಸಿ.ಎ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂನ ವಿರಾಜಪೇಟೆ ತಾಲ್ಲೂಕು ಘಟಕದ ಸಹ ಕಾರ್ಯದರ್ಶಿ ಸೈಫುದ್ದಿನ್ ಚಾಮಿಯಾಲ, ಸದಸ್ಯ ಹಾರಿಸ್ ಎಸ್.ಎಂ., ಕೆಡಿಎಸ್ ಮುಸ್ಲಿಂ ಚಾರಿಟಿಯ ಕಾರ್ಯದರ್ಶಿ ಆಶಿಕ್ ಸಿ.ಎಂ, ಕೋಶಾಧಿಕಾರಿ ಸಿ.ಎಂ.ರಜಾಕ್ ಹಾಗೂ ಸದಸ್ಯ ಪಿ.ಎಂ.ಶೌಕತ್ ಉಪಸ್ಥಿತರಿದ್ದರು.