
ನಾಪೋಕ್ಲು ನ.30 NEWS DESK : ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ನೈತಿಕ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ಕೊಡುಗೆ ನೀಡಬೇಕೆಂದು ಮೈಸೂರು ಚಾಮರಾಜ ಜೋಡಿ ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಕರೆ ನೀಡಿದರು. ಮದೆನಾಡಿನ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ನಡೆದ ನುಡಿಹಬ್ಬ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಪೋಷಕರು, ಶಿಕ್ಷಕರು, ಹಿರಿಯರನ್ನು ಗೌರವಿಸುವ ಜೊತೆಗೆ ತಮ್ಮ ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕಡೆಗೆ ಗಮನ ಹರಿಸಬೇಕು. ಸಮಾಜಕ್ಕೆ ನಾವು ಕೊಡುಗೆ ನೀಡಿದರೆ ಸಮಾಜ ನಮ್ಮನ್ನು ಸದಾ ಸ್ಮರಿಸುತ್ತದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮದೆಮಹೇಶ್ವರ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹುದೇರಿ ರಾಜೇಂದ್ರ ಮಾತನಾಡಿ, ಮಕ್ಕಳು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗುಡಿಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಮೇಲ್ವಿಚಾರಕ ಸಚಿನ್, ಮುಖ್ಯಪಾಧ್ಯಾಯಿನಿ ಮುದ್ಯನ ಪುನೀತ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಜಯಶ್ರೀ ಪ್ರಾರ್ಥಿಸಿ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪ ನಿರೂಪಿಸಿದರು. ಶಿಕ್ಷಕಿ ಜಲಜಾಕ್ಷಿ ವಂದಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಹಾಗೂ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ವರದಿ : ದುಗ್ಗಳ ಸದಾನಂದ.








