
ವಿರಾಜಪೇಟೆ NEWS DESK ನ.30 : ವಿರಾಜಪೇಟೆಯ ಅರ್ಜಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಮಮತ ಅವರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತು ಮಾಡಲಾಗಿದೆ. ಮಮತ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಅಲ್ಪಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕರು ಮತ್ತು ಶಿಸ್ತು ಪ್ರಾಧಿಕಾರದ ಅಧಿಕಾರಿ ಜೀಲಾನಿ ಹೆಚ್.ಮೊಕಾಶಿ ಆದೇಶ ಹೊರಡಿಸಿದ್ದಾರೆ. ವಸತಿ ಶಾಲೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್ .ಪೊನ್ನಣ್ಣ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭ ಕೆಲವು ನ್ಯೂನತೆಗಳು ಕಂಡು ಬಂದಿತ್ತು. ಶಾಲೆಯ ಅಡುಗೆ ಕೋಣೆ ನೊಣಗಳಿಂದ ಕೂಡಿರುವುದು, ಶಾಲೆಯ ಕಿಟಕಿಗಳು ಪಾಳು ಬಿದ್ದಿರುವುದು, ಶೌಚಾಲಯದಲ್ಲಿ ಶುಚಿತ್ವ ಕಾಪಾಡದೇ ಇರುವುದು, ವಿದ್ಯಾರ್ಥಿಗಳು ಬಳಸುವ ಹಾಸಿಗೆಗಳು ಯೋಗ್ಯವಾಗಿಲ್ಲದಿದ್ದರೂ ಶಾಲೆಯಲ್ಲಿರುವ ಹೊಸ ಹಾಸಿಗೆಯನ್ನು ವಿತರಣೆ ಮಾಡದೇ ಇರುವುದು, ದಾಸ್ತಾನು/ವಿತರಣೆ ನಿರ್ವಹಣೆ ಮಾಡದೇ ಇರುವುದು, ಸಹದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದದೆ ಇರುವುದು ಗೋಚರಿಸಿತ್ತು. ಕಳೆದ 6 ವರ್ಷಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು ಶಾಲೆಯ ನ್ಯೂನ್ಯತೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಸಮಸ್ಯೆಗಳನ್ನು ಬಗೆಹರಿಸದೆ ನಿರ್ಲಕ್ಷ್ಯತೆ ವಹಿಸಿರುವುದು ಶಾಸಕರ ಗಮನಕ್ಕೆ ಬಂದಿತ್ತು. ಕತ೯ವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಇದೀಗ ವಿರಾಜಪೇಟೆ ಅರ್ಜಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಮಮತ ಅವರನ್ನು ಕತ೯ವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.








