ಮಡಿಕೇರಿ
NEWS DESK ಡಿ.2 : ನಿವೃತ್ತ ಪೊಲೀಸ್ ಅಧಿಕಾರಿಗಳ ಶ್ರೇಯೋಭಿವೃದ್ಧಿಗೆ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ‘ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ’ದ ಬೆಳ್ಳಿ ಮಹೋತ್ಸವ ಡಿ.10 ರಂದು ನಗರದ ಮೈತ್ರಿ ಸಭಾಂಗಣದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಗೌರವಾಧ್ಯಕ್ಷರಾದ ಮುಕ್ಕಾಟಿರ ಎ.ಅಪ್ಪಯ್ಯ, ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯವರೇ ಆದ ಲೆಫ್ಟಿನೆಂಟ್ ಜನರಲ್(ನಿವೃತ್ತ) ಡಾ.ಪ್ರೊ.ಬಿ.ಎನ್.ಬಿ.ಮಹಾವೀರ ಪ್ರಸಾದ್ ಎಸ್‌ಎಂ, ವಿಎಸ್‌ಎಂ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆಯೆಂದು ತಿಳಿಸಿದರು. ಸಮಾರಂಭವನ್ನು ಜಿಲ್ಲೆಯ ಎಸ್‌ಪಿಯಾಗಿ ಕಾರ್ಯನಿರ್ವಹಿಸಿ, ಮೈತ್ರಿ ಸಭಾಂಗಣದ ನಿರ್ಮಾಣಕ್ಕೆ ಕಾರಣಕರ್ತರಾದ ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್‌ರವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಜಾಯಿಂಟ್ ಕಂಟ್ರೋಲರ್ ಫೈನಾನ್ಸ್ ಬಿ.ಜಿ. ಮಾದಪ್ಪ, ಜಿಲ್ಲಾ ಪೊಲಿಸ್ ಅಧೀಕ್ಷಕರಾದ ಕೆ.ರಾಮರಾಜನ್ ಪಾಲ್ಗೊಳ್ಳಲಿದ್ದಾರೆ. ಸನ್ಮಾನ- ಸಮಾರಂಭದಲ್ಲಿ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಹಿಂದಿನ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳನ್ನು, ಸಂಘಕ್ಕೆ ಆರ್ಥಿಕ ನೆರವನ್ನಿತ್ತವರನ್ನು, ಬರಹಗಾರರು ಮತ್ತು ಬರಹಗಾರ್ತಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು. ರಾಜ್ಯದ ಮೊದಲ ಸಂಘ- ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು 2000ನೇ ಇಸವಿಯಲ್ಲಿ ರಾಜ್ಯದ ಮೊದಲ ಸಂಘವಾಗಿ, ಅಂದಿನ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದಿತೆ0ದು ಎಂ.ಎ.ಅಪ್ಪಯ್ಯ ಹೇಳಿದರು. ಅಂದಿನ ದಿನಗಳಲ್ಲಿ ನಿವೃತ್ತ ಡಿವೈಎಸ್‌ಪಿ ದಿ.ಕಾಳೇರಮ್ಮನ ನಾಣಯ್ಯ ಅವರ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 28 ಮಂದಿ ಅಧಿಕಾರಿಗಳನ್ನು ಸೇರಿಸಿಕೊಂಡು ಸಂಘವನ್ನು ಸ್ಥಾಪಿಸಲಾಗಿದ್ದು, ಆ ಸಂದರ್ಭ ಇದಕ್ಕೆ ಅಂದಿನ ಐಜಿಪಿಯವರಾಗಿದ್ದ ದಿ.ಸಿ.ವಿ.ಎಸ್.ರಾವ್ ಅನುಮತಿಯ ಆದೇಶ ಹೊರಡಿಸಿದ್ದನ್ನು ಸ್ಮರಿಸಿಕೊಂಡ ಅಪ್ಪಯ್ಯ ಅವರು, ಪ್ರಸ್ತುತ ಸಂಘದಲ್ಲಿ ಒಂದು ಸಾವಿರ ಸದಸ್ಯರುಗಳಿದ್ದಾರೆಂದು ಹೆಮ್ಮೆಯಿಂದ ನುಡಿದರು.
ನಂತರದ ದಿನಗಳಲ್ಲಿ ಸಿ.ಟಿ. ಪೂವಯ್ಯ, ವೈ.ಡಿ. ಕೇಶವಾನಂದ ಅವರುಗಳ ಮಾರ್ಗದರ್ಶನದಲ್ಲಿ ಸಂಘ ಬೆಳವಣಿಗೆಯನ್ನು ಕಂಡಿತು. 2008ರಿಂದ ತಾನು ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು, ತನ್ನ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘ ತನ್ನದೇ ಆದ ‘ಸ್ವಾಭಿಮಾನ’ ಕಟ್ಟಡವನ್ನು ಹೊಂದಿಕೊ0ಡಿದ್ದಾಗಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಬಿ.ಆರ್.ಲಿಂಗಪ್ಪ, ಕಾರ್ಯದರ್ಶಿ ಅಚ್ಚುತ ನಾಯರ್, ಜಂಟಿ ಕಾರ್ಯದರ್ಶಿ ಎಂ.ಕೆ.ಕಾವೇರಪ್ಪ ಹಾಗೂ ಖಜಾಂಚಿ ಬಿ.ಎಂ.ಭೀಮಯ್ಯ ಉಪಸ್ಥಿತರಿದ್ದರು.