
ಮಡಿಕೇರಿ ಡಿ.3 NEWS DESK : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳೋದಯ ಮಹಿಳಾ ಒಕ್ಕೂಟ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ “ಲಿಂಗಾಧಾರಿತ ದೌರ್ಜನ್ಯ ನಿವಾರಿಸುವ ಅರಿವು ಶಿಬಿರ ಹಾಗೂ ಏಡ್ಸ್ ದಿನಾಚರಣೆ” ನಡೆಯಿತು. ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಡಿಪಿ ಸಂಘದ ಮಹಿಳೆಯರಿಗೆ ಲಿಂಗಾಧಾರಿತ ದೌರ್ಜನ್ಯ ನಿವಾರಿಸುವ ಅರಿವು ಮೂಡಿಸಲಾಯಿತು. ಕಾರ್ಯಕ್ರಮವನ್ನು ಒಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಜಾಯ್ಸಿ ಮೇನೆಜರ್ಸ್ ಉದ್ಘಾಟಿಸಿ ಮಾತನಾಡಿ, ಒಡಿಪಿ ಸಂಘದ ಮುಖಾಂತರ ಮಹಿಳೆಯರು ಸಲೀಕರಣ ಹೊಂದಬೇಕು ಹಾಗೂ ಮಹಿಳೆಯರು ಲಿಂಗ ಸಮಾನತೆ ಸಾಧಿಸಬೇಕು. ಎಲ್ಲರೂ ಸಮಾನ ಎಂಬ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕಣ ಘಟಕದ ಜಿಲ್ಲಾ ಸಂಯೋಜಕರಾದ ಬಿ.ಎಸ್.ಮಮತ ಮಾತನಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೊರೆಯುವ ಯೋಜನೆಗಳಾದ ಮಾತೃವಂದನಾ, ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಸಂತ್ವಾನ, ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಭಾಗ್ಯಲಕ್ಷಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಬಗ್ಗೆ ಸಂಘದ ಮಹಿಳೆಯರಿಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ ಮಹಿಳೆಯರು ಪುರುಷರಷ್ಟೆ ಸಮಾನರು. ತನ್ನಲ್ಲಿ ಆತ್ಮಸ್ಥೈರ್ಯ ಬೆಳಸಿಕೊಂಡು ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರುತಿಸಿಕೊಳ್ಳಬೇಕು ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಶಿಕ್ಷಣವಂತರಾಗಬೇಕು. ಸಾಮಾಜಿಕ ಸಮಸ್ಯೆಯನ್ನು ಅರಿತುಕೊಂಡು ತಮ್ಮ ಸಮಸ್ಯೆಯನ್ನು ತಾವೇ ಗುರುತಿಸಿಕೊಂಡು ಸಮಸ್ಯೆಯನ್ನು ಬಗೆಹರಿಸುವಷ್ಟರ ಮಟ್ಟಿಗೆ ಮಹಿಳೆ ಸಬಲೀಕರಣ ಹೊಂದಬೇಕು. ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ 181 ಮಹಿಳಾ ಸಹಾಯವಾಣಿಗೆ ದೂರನ್ನು ಸಲ್ಲಿಸಬಹುದು ಹಾಗೂ ಕಾನೂನು ಸೇವಾ ಪ್ರಾಧಿಕಾರದಲ್ಲಿ ಮಹಿಳೆಯರು ದೂರನ್ನು ದಾಖಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಆರೋಗ್ಯ ಇಲಾಖೆಯಿಂದ ಸಮುದಾಯ ಸುರಕ್ಷಧಿಕಾರಿಯವರಾದ ಜ್ಯೋತಿ ಎಚ್‍ಐವಿ ಏಡ್ಸ್ ಕುರಿತು ಜನರು ಜಾಗೃತರಾಗಬೇಕು ಹಾಗೂ ಈ ಸೋಂಕಿಗೆ ತುತ್ತಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ.ಉಪಾಧ್ಯಾಕ್ಷರು, ಆಶಾ ಕಾರ್ಯಕರ್ತರು, ಸಂಘದ ಮಹಿಳೆಯರು, ಒಡಿಪಿ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.









