


ಮಡಿಕೇರಿ ಡಿ.4 NEWS DESK : ಭಾರತ ದೇಶ ವಿಶ್ವ ಮಟ್ಟದಲ್ಲಿ ಶಕ್ತಿಯುತವಾಗಿ ವಿಶೇಷ ಸ್ಥಾನಮಾನದಲ್ಲಿ ಗುರುತಿಸಿಕೊಂಡಿರುವುದಕ್ಕ್ಕೆ ಸಂವಿಧಾನವೇ ಮುಖ್ಯ ಕಾರಣವಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಅಭಿಪ್ರಾಯಪಟ್ಟಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ರಾಜ್ಯಶಾಸ್ತ್ರ ವಿಭಾಗವು 75 ವರ್ಷವನ್ನು ಪೂರೈಸುತ್ತಿರುವ ಸವಿನೆನಪಿಗಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ರಾಜ್ಯಶಾಸ್ತ್ರ ಸಂಘ ಹಾಗೂ ಮಾನವ ಹಕ್ಕುಗಳ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಆಧುನಿಕ ಸಮಾಜದಲ್ಲಿ ಸಾಂವಿಧಾನಿಕ ಮೌಲ್ಯಗಳ ಪ್ರಸ್ತುತತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೇಜರ್ ಪ್ರೊ.ಬಿ.ರಾಘವ ಅವರು, ಸಂವಿಧಾನ ಜಾರಿಯಾಗಿ 75 ವರ್ಷಗಳೇ ಕಳೆದರು, ಯಾವುದೇ ನ್ಯೂನತೆಗಳು ಬಾರದಂತೆ ಜನರ ಅಗತ್ಯತೆಗೆ ತಕ್ಕಂತೆ ತಿದ್ದುಪಡಿಗಳನ್ನು ಮಾಡಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ನೋಡಿಕೊಳ್ಳಲಾಗಿದೆ. ಸಂವಿಧಾನ ನಾಗರೀಕ ಸಮಾಜಕ್ಕೆ ಮೂಲಭೂತ ಹಕ್ಕುಗಳೊಂದಿಗೆ ರಕ್ಷಣೆಯನ್ನು ನೀಡುತ್ತಾ ಬಂದಿದೆ ಮತ್ತು ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ ಎಂದರು. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಧರ್ಮ ನಿರಪೇಕ್ಷಿತ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಸ್ವಾತಂತ್ರ್ಯ, ವ್ಯಕ್ತಿ ಗೌರವ, ನಂಬಿಕೆ, ಪ್ರಜಾಪ್ರಭುತ್ವದಂತ ಪರಿಕಲ್ಪನೆಗಳನ್ನು ಸರ್ವ ನಾಗರೀಕರಿಗೂ ಸಮಾನವಾಗಿ ದೊರೆಯುವಂತೆ ಮಾಡುವುದಕ್ಕಾಗಿ ವಿಶೇಷ ಕಾನೂನುಗಳನ್ನು ರೂಪಿಸಿದ ಕೀರ್ತಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಮೇಜರ್ ಪ್ರೊ.ಬಿ.ರಾಘವ ಹೇಳಿದರು.
ಸಮಾಜದಲ್ಲಿನ ತೊಡಕು ಮತ್ತು ನಕಾರಾತ್ಮಕತೆಯ ಪರಿಸ್ಥಿತಿಯನ್ನು ದಾಟಿ ವಿದ್ಯಾರ್ಥಿಗಳು ಸ್ವಚ್ಛಂದ ಬದುಕನ್ನು ಕಟ್ಟಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು “ಆಧುನಿಕ ಸಮಾಜದಲ್ಲಿ ಸಾಂವಿಧಾನಿಕ ಮೌಲ್ಯಗಳ ಪ್ರಸ್ತುತತೆ” ಎಂಬ ವಿಷಯದ ಕುರಿತು ಮಾತನಾಡಿದ ಪ್ರೊ.ಹೆಚ್.ಪಿ.ನಿರ್ಮಲ ಅವರು ಸಂವಿಧಾನದ ಮೌಲ್ಯಗಳು ಹಾಗೂ ನಾಗರೀಕ ಸಮಾಜಕ್ಕೆ ಅಗತ್ಯ ಇರುವ ಮೂಲಭೂತ ಹಕ್ಕುಗಳ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಟ್ಟರು. ಭಾರತ ಸಂವಿಧಾನದ ಮೂಲ ರಚನೆ, ಪ್ರಸ್ತಾವನೆ, ಸಾರ್ವಭೌಮ, ಸಮಾಜವಾದ, ಪ್ರಜಾಸತಾತ್ಮಕ ಗಣರಾಜ್ಯ, ಭ್ರಾತೃತ್ವ, ವೈವಿಧ್ಯತೆಯಲ್ಲಿ ಏಕತೆ, ಸ್ವಾತಂತ್ರ್ಯ ಮೊದಲಾದ ಸಂವಿಧಾನಿಕ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಗಾಯತ್ರಿ ದೇವಿ ಮಾತನಾಡಿ, ಸಂವಿಧಾನದ ಉನ್ನತ ವಿಚಾರಧಾರೆಯನ್ನು ವಿವರಿಸಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಡಾ.ಕೆ.ಎಸ್.ಶೃಂಗಾರ್ ಮಾತನಾಡಿ, ಕಾರ್ಯಕ್ರಮದ ರೂಪರೇಷೆ ಮತ್ತು ರಾಜ್ಯಶಾಸ್ತ್ರ ವಿಭಾಗದ ಚಟುವಟಿಕೆಗಳ ಬಗ್ಗೆ ಉಲ್ಲೇಖ ಮಾಡಿ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು. ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ರಾಜ್ಯಶಾಸ್ತ್ರದ ಸಮಿತಿಯ ಅಧ್ಯಕ್ಷರಾದ ನಿವ್ಯ ಮೇದಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಮಹದೇವಯ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಇ.ಪ್ರೊ.ತಿಪ್ಪೇಸ್ವಾಮಿ, ಹಿಂದಿ ವಿಭಾಗದ ಮುಖ್ಯಸ್ಥ ಬಿ.ಹೆಚ್.ತಳವಾರ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಪ್ರೊ.ನಯನ, ಗಣಿತಶಾಸ್ತ್ರ ಮುಖ್ಯಸ್ಥ ಪ್ರೊ. ರಾಜೇಂದ್ರ, ಕಾಲೇಜಿನ ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡೀನಾ ಗೌತಮ್ ಕಾರ್ಯಕ್ರಮ ನಡೆಸಿಕೊಟ್ಟರು.








