ಮಡಿಕೇರಿ ಡಿ.7 NEWS DESK : ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕದ ಆವರಣದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗ್ರೂಪ್ ಕ್ಯಾಪ್ಟನ್(ನಿವೃತ್ತ) ಬಿ.ಎನ್.ಮನು ಭೀಮಯ್ಯ, ಜಿಲ್ಲಾಧಿಕಾರಿ ಮತ್ತು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಐಪಿಎಸ್ ಪ್ರೊಬೆಷನರಿ ಅಧಿಕಾರಿ ಬೆನಕ ಪ್ರಸಾದ್, ಏರ್ ಮಾರ್ಷಲ್(ನಿ) ನಂದ ಕಾರ್ಯಪ್ಪ, ಏರ್ ಕಮಾಂಡರ್(ನಿ) ದೇವಯ್ಯ, ಕರ್ನಲ್(ನಿ) ಕಾವೇರಪ್ಪ, ಲೆ.ಕರ್ನಲ್(ನಿವೃತ್ತ) ನಾಚಪ್ಪ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಬಿ.ಆರ್.ಶೆಟ್ಟಿ ಹಾಗೂ ನಿವೃತ್ತ ಸೈನಿಕರು, ಎನ್‍ಸಿಸಿ ವಿದ್ಯಾರ್ಥಿಗಳು ಇತರರು ಯುದ್ಧ ಸ್ಮಾರಕಕ್ಕೆ ಪುಷ್ಪ ಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದರು. ಕರ್ತವ್ಯ ಪಾಲನೆಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಸ್ಮರಣಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿ, ಮೌನಾಚರಿಸಲಾಯಿತು. ಗ್ರೂಪ್ ಕ್ಯಾಪ್ಟನ್ ಬಿ.ಎನ್.ಮನು ಭೀಮಯ್ಯ ಅವರು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು. ಪೊಲೀಸ್ ಇಲಾಖೆಯ ಎಆರ್‍ಎಸ್‍ಐ ತಂಡದವರು ಗೌರವ ವಂದನೆ ನಡೆಸಿಕೊಟ್ಟರು. ಹಾಗೆಯೇ ಪೊಲೀಸ್ ಬ್ಯಾಂಡ್ ತಂಡದವರು ಪೊಲೀಸ್ ವಾದ್ಯದೊಂದಿಗೆ ಗೌರವ ನಮನ ಸಲ್ಲಿಸಿದರು. ಮಾಜಿ ಸೈನಿಕರು, ಪೊಲೀಸರು, ಎನ್‍ಸಿಸಿ ವಿದ್ಯಾರ್ಥಿಗಳು, ಇತರರು ಗೌರವ ಸಲ್ಲಿಸಿದರು.