ಕುಶಾಲನಗರ ಡಿ.9 NEWS DESK : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಆಗ ಮಾತ್ರ ಆತ್ಮವಿಶ್ವಾಸ ವೃದ್ಧಿಸಲು ಸಾಧ್ಯ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಸಾಹಿತಿ ಮಿಲನಾ ಭರತ್ ಅಭಿಪ್ರಾಯಪಟ್ಟರು. ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿ. ಸೀತಾಭಾಯಿ ಮತ್ತು ರಾಮಚಂದ್ರ ಕಾಮತ್ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಕುರಿತು ಉಪನ್ಯಾಸ ನೀಡಿದರು. ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ, ಸಮಯ ಪಾಲನೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವು ಕಲಿತ ವಿದ್ಯೆಗೆ ಬೆಲೆ ಸಿಗುತ್ತೆ ಎಂದರು. ಈಗಿನ ಕಾಲಮಾನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆಯಿದೆ. ಕಲಿತ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಸದ್ಬಳಕೆ ಮಾಡಿಕೊಂಡರೆ ಮಾತ್ರ ಗೌರವ ದೊರೆಯುತ್ತದೆ. ಹೆಣ್ಣು ಮಕ್ಕಳು ಕೇವಲ ಮನೆ, ಗಂಡ ಮಕ್ಕಳು ಎನ್ನದೇ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು. ಶ್ರೇಷ್ಠ ಗುರಿ ಇಟ್ಟುಕೊಳ್ಳಿ, ಅದನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ. ಯಶಸ್ಸು ಎನ್ನುವುದು ತನ್ನತಾನೆ ದೊರೆಯುತ್ತದೆ ಎಂದರು. ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಬೇಕು ಎಂದರೆ ಒಬ್ಬ ಸಣ್ಣ ಹುಡುಗನನ್ನು ಆದರೂ ಜೊತೆಯಲ್ಲಿ ಕಳುಹಿಸುತ್ತಿದ್ದರು. ಗಂಡಸರನ್ನು ಅಷ್ಟರ ಮಟ್ಟಿಗೆ ಅವಲಂಭಿಸಬೇಕಿತ್ತು. ಈಗ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಇದ್ದಾರೆ ಎಂದು ಹೇಳುವ ಮೂಲಕ ವಿದ್ಯಾರ್ಥಿನಿಯರಲ್ಲಿ ಸ್ಫೂರ್ತಿ ತುಂಬಿದರು. ಕಾಲೇಜಿನ ಪ್ರಾಂಶುಪಾಲ ಡಾ.ಪರಶಿವಮೂರ್ತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳ ಮೂಲಕ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಗುರಿಯ ಬೆನ್ನು ಹತ್ತಲು ಇದು ಪ್ರಮುಖ ಘಟ್ಟ. ಉತ್ತಮರನ್ನು ಆಯ್ಕೆ ಮಾಡಿಕೊಂಡು ದೇಶಕ್ಕೆ ಅಸ್ತಿಯಾಗಲು ಕಿವಿ ಮಾತು ಹೇಳಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಶಿಕ್ಷಕರ ಮಾತುಗಳನ್ನು ಪಾಲಿಸಿ. ತಮ್ಮ ಶಿಕ್ಷಕರಿಗಿಂತ ಶ್ರೇಷ್ಠ ಸಾಧನೆ ಮಾಡಿ. ಮುಂದೆ ಒಂದು ದಿನ ಸಮಾಜ ನಿಮ್ಮನ್ನು ಉದಾಹರಣೆ ಮಾಡಿಕೊಳ್ಳುತ್ತದೆ. ಅಂತಹ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಿ ಎಂದು ಕರೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ದೇವರಾಜ್, ಪ್ರೊಫೆಸರ್ ಗಳಾದ ಡಾ.ಸೀನಪ್ಪ, ಡಾ.ಸತೀಶ್ ಸಂದರ್ಭೋಚಿತವಾಗಿ ಮಾತನಾಡಿದರು. ದತ್ತಿ ದಾನಿಗಳಾದ ಆರ್.ರಾಜಾರಾವ್, ಸಂಧ್ಯಾ ಕಾಮತ್, ದೀಪಾ, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಎನ್.ಮೂರ್ತಿ, ಕಾರ್ಯದರ್ಶಿ ಸುಬ್ರಮಣಿ, ತಾಲೂಕು ನಿರ್ದೇಶಕರಾದ ಡಿ.ಆರ್.ಸೋಮಶೇಖರ್, ಪರಮೇಶ್, ಎಂ.ಎನ್.ಕಾಳಪ್ಪ, ಉದ್ಯಮಿ ಅರ್ಜುನ್ ಗುಪ್ತ, ಅವರ್ತಿ.ಆರ್.ಮಹದೇವಪ್ಪ, ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಇತರರು ಹಾಜರಿದ್ದರು. ಇದೇ ವೇಳೆ 2022 – 23 ರಲ್ಲಿ ಕನ್ನಡ ಮಾಧ್ಯಮದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣವಾಗಿದ್ದ ಕೊಡ್ಲಿಪೇಟೆಯ ಹರ್ಷಿತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.