ಮಡಿಕೇರಿ ಡಿ.9 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಟೀಂ ಚೀತಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಂ ಚೀತಾ ಮತ್ತು ಟೀಂ ಸ್ಮಾಷರ್ಸ್ ನಡುವಿನ ಜಿದ್ದಜಿದ್ದಿನ ಫೈನಲ್ ಪಂದ್ಯದಲ್ಲಿ ಟೀಂ ಚೀತಾ ತಂಡ ನೇರ ಸೆಟ್‍ಗಳಿಂದ ಟೀಂ ಸ್ಮಾಷರ್ಸ್ ತಂಡವನ್ನು ಮಣಿಸಿತು. ಪರಿಣಾಮ ಪೇಮ್‍ಕುಮಾರ್ ನಾಯಕ್ವದ ಟೀಂ ಚೀತಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಇಸ್ಮಾಯಿಲ್ ಕಂಡಕೆರೆ ನಾಯಕತ್ವದ ಟೀಂ ಸ್ಮಾಷರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಇದಕ್ಕೂ ಮೊದಲು 5 ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಟೀಂ ಜಂಪರ್ಸ್, ಟೀಂ ಪವರ್ ಪಂಚರ್ಸ್, ಟೀಂ ಹಂಟರ್ಸ್, ಟೀಂ ಚೀತಾ, ಟೀಂ ಸ್ಮಾಷರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರು. ಟೇಬಲ್ ಟಾಪರ್ ಟೀಂ ಚೀತಾ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್ ನಾಯಕತ್ವದ ಟೀಂ ಜಂಪರ್ಸ್ ತಂಡ ಟೀಂ ಸ್ಮಾಷರ್ಸ್ ತಂಡವನ್ನು ಮೊದಲ ಸೆಟ್‍ನಲ್ಲಿ ಮಣಿಸಿತು. ಎರಡನೇ ಸೆಟ್‍ನಲ್ಲಿ ಟೀಂ ಜಂಪರ್ಸ್ ಸೋಲುಂಡಿತ್ತು. ನಿರ್ಣಾಯಕ ಸೆಟ್‍ನಲ್ಲಿ ಟೀಂ ಸ್ಮಾಷರ್ಸ್ ಉತ್ತಮ ಪ್ರದರ್ಶನದೊಂದಿಗೆ ಫೈನಲ್ ಪ್ರವೇಶಿಸಿತು.
ವೈಯಕ್ತಿಕ ಪ್ರಶಸ್ತಿ ವಿವರ :: ಪಂದ್ಯಾವಳಿಯಲ್ಲಿ ಬೆಸ್ಟ್ ಮಹಿಳಾ ಆಟಗಾರ್ತಿಯಾಗಿ ಟೀಂ ಜಂಪರ್ಸ್ ತಂಡ ಪೇರಿಯಂಡ ಜಯಂತಿ ಉತ್ತಪ್ಪ ಪಡೆದುಕೊಂಡರೆ, ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಟೀಂ ಸ್ಮಾಷರ್ಸ್ ತಂಡ ಇಸ್ಮಾಯಿಲ್ ಕಂಡಕೆರೆ ಪಡೆದುಕೊಂಡರು. ಆಲ್ ರೌಂಡರ್ ಪ್ರಶಸ್ತಿಯನ್ನು ಟೀಂ ಚೀತಾ ತಂಡದ ಪ್ರೇಮ್ ಕುಮಾರ್ ಪಡೆದುಕೊಂಡರು. ಪಂದ್ಯಾಟದ ತೀರ್ಪುಗಾರರಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ಪ್ರೇಮ್ ಹಾಗೂ ಭವನ್ ಪೂಜಾರಿ ಕಾರ್ಯನಿರ್ವಹಿಸಿದರು.
ಉದ್ಘಾಟನಾ ಸಮಾರಂಭ :: ಕ್ರೀಡೆಯಿಂದ ಪತ್ರಕರ್ತರ ಸಂಘಟನೆ ಬಲಗೊಳ್ಳುವ ಜೊತೆಗೆ ಭಾಂದವ್ಯ ವೃದ್ಧಿಯಾಗುತ್ತದೆ ಎಂದು ಫೀ.ಮಾ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ್ ಹೇಳಿದರು. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಕ್ರೀಡಾಕೂಟಗಳಿಂದ ಮನೋಲ್ಲಾಸ ಪಡೆಯಬಹುದು. ನಾಯಕತ್ವ, ಕೌಶಲ್ಯ ಅಭಿವೃದ್ಧಿಗೊಳ್ಳುತ್ತದೆ. ಎಲ್ಲರೂ ಒಗ್ಗೂಡಿದಾಗ ಸಂಘಟನೆ ಬಲಿಷ್ಠಗೊಳ್ಳುತ್ತದೆ ಎಂದರು. ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಮಾತನಾಡಿ, ಕ್ರೀಡೆಯು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದೈನಂದಿನ ಜಂಜಾಟದಲ್ಲಿರುವ ಪತ್ರಕರ್ತರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅವಶ್ಯಕ. ಸದಾ ಚಟುವಟಿಕೆಯಿಂದ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಪತ್ರಿಕೋದ್ಯಮ ವೃತ್ತಿ ವಿಭಿನ್ನವಾಗಿದ್ದು, ಸದಾ ಸುದ್ದಿಯ ಭರಾಟೆಯಲ್ಲಿರುತ್ತಾರೆ. ಪ್ರತಿ ದಿನದ ಆಗು ಹೋಗುಗಳನ್ನು ತಕ್ಷಣಕ್ಕೆ ಜನರಿಗೆ ತಿಳಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಉದ್ಯಮಿ ಶಂಕರ್ ಪೂಜಾರಿ ಮಾತನಾಡಿ, ಪತ್ರಕರ್ತರು ಬಿಡುವಿನ ಸಮಯದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡಾ ಸ್ಪೂರ್ತಿ ಜೀವನಕ್ಕೂ ಸಹಕಾರಿಯಾಗಲಿದೆ ಎಂದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕ್ಲಬ್‍ನ ಪ್ರ.ಕಾರ್ಯದರ್ಶಿ ಆದಶ್ ಅದ್ಕಲೇಗಾರ್, ಸಂಘದ ಪ್ರ.ಕಾರ್ಯದರ್ಶಿ ಅನು ಕಾರ್ಯಪ್ಪ, ಖಜಾಂಚಿ ಆನಂದ್ ಕೊಡಗು, ಕ್ರೀಡಾಕೂಟ ಸಂಚಾಲಕ ಲೋಹಿತ್ ಮಾಗುಲು ಉಪಸ್ಥಿತರಿದ್ದರು.
ಕ್ರೀಡಾಕೂಟ ಆಯೋಜನೆಯಿಂದ ಒಗ್ಗಟ್ಟು ಮೂಡುತ್ತದೆ :: ವಾಲಿಬಾಲ್ ವೈಭವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆ.ಎಂ.ಬಿ.ಗಣೇಶ್, ಪತ್ರಕರ್ತರು ಮೊದಲ ಬಾರಿಗೆ ವಾಲಿಬಾಲ್ ಆಡಿ ಗಮನ ಸೆಳೆದಿದ್ದಾರೆ. ಕ್ರೀಡಾಕೂಟ ಆಯೋಜನೆಯಿಂದ ಒಗ್ಗಟ್ಟು ಮೂಡುತ್ತದೆ. ಈ ರೀತಿ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಆಶೀಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರಿಗಾಗಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿದೆ. ಸದಾ ಜಂಜಾಟದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಕ್ರೀಡಾಕೂಟ ಪೂರಕವಾಗಿದ್ದು, ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ ಎಂದರು. ಕೌಶನ್ ಮಾತನಾಡಿ, ಬಿಡುವೆಲ್ಲದ ಕೆಲಸ ನಡುವೆ ಪತ್ರಕರ್ತರಿಗೆ ಈ ರೀತಿ ಕಾರ್ಯಕ್ರಮಗಳು ಅಗತ್ಯವಿದೆ. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಪತ್ರಕರ್ತರ ಮನೋಲ್ಲಾಸಕ್ಕೆ ಆಟೋಟ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಜೈರುಸ್ ಥಾಮಸ್ ಅಲೆಗ್ಸಾಂಡರ್ ಮಾತನಾಡಿದರು. ಇದೇ ಸಂದರ್ಭ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ವಾಲಿಬಾಲ್ ಹಾಗೂ ನೆಟ್ ಅನ್ನು ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಹಸ್ತಾಂತರಿಸಲಾಯಿತು.