ಮಡಿಕೇರಿ ಡಿ.9 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಗೆ ಮಡಿಕೇರಿಯಲ್ಲಿ ಮಂಜೂರಾಗಿರುವ 40 ಸೆಂಟ್ಸ್ ಜಾಗದಲ್ಲಿ ಸುಮಾರು ರೂ.5ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಂಘದ ನೂತನ ಜಿಲ್ಲಾಧ್ಯಕ್ಷ ಮುಕ್ಕಾಟಿರ ಸಿ.ಅರುಣ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರರ ಸಂಘಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 40 ಸೆಂಟ್ಸ್ ಜಾಗವನ್ನು ಹಿಂದಿನ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಈ ಜಾಗದಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಮಾಡುವ ಉದ್ದೇಶವನ್ನು ನೂತನ ಆಡಳಿತ ಮಂಡಳಿ ಹೊಂದಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಹಂತದ ಎಲ್ಲಾ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಂದ ವಂತಿಗೆ ಮತ್ತು ಸಹಕಾರ ಪಡೆಯಲು ಹಾಗೂ ಸಾರ್ವಜನಿಕರ ಬೆಂಬಲ ಮತ್ತು ಆರ್ಥಿಕ ಸಹಾಯ ಪಡೆಯಲು ಉದ್ದೇಶಿಸಿರುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಯ 2024-29ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದೇನೆ. ಜಿಲ್ಲಾ ಖಜಾಂಚಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉದ್ಯೋಗಿ ಪುಲಿಯಂಡ ಡಿ.ರಾಜೇಶ್, ರಾಜ್ಯ ಪರಿಷತ್ ಸದಸ್ಯರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ವಾಹನ ಚಾಲಕರಾದ ಬಾಬು ಪಿ.ಎಂ. ಆಯ್ಕೆಯಾಗಿದ್ದಾರೆ ಎಂದರು. ಜಿಲ್ಲಾ ಸಂಘಕ್ಕೆ ಒಟ್ಟು 45 ನಿರ್ದೇಶಕರು ಹಾಗೂ ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಒಟ್ಟು 47 ಮಂದಿ ನಿರ್ದೇಶಕರಿದ್ದು, ಇವರ ಮುಖೇನ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಕೇಂದ್ರ ಸಂಘದ ನಿರ್ದೇಶನದಂತೆ ನಿರ್ದೇಶಕರಾಗಿ ಆಯ್ಕೆಯಾಗಿರುವವರಲ್ಲಿ ಒಬ್ಬರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಬೇಕಿತ್ತು. ಅದರಂತೆ ಈ ಸ್ಥಾನಕ್ಕೆ ಮಡಿಕೇರಿಯ ಪೊಲೀಸ್ ಇಲಾಖೆಯ ಪಾರೆಮಜಲು ಜಿ.ತ್ರಿಶೂಲ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ಪುಲಿಯಂಡ ಡಿ.ರಾಜೇಶ್, ರಾಜ್ಯ ಪರಿಷತ್ ಸದಸ್ಯ ಬಾಬು ಪಿ.ಎಂ., ಪ್ರಧಾನ ಕಾರ್ಯದರ್ಶಿ ಪಾರೆಮಜಲು ಜಿ.ತ್ರಿಶೂಲ್, ನಿರ್ದೇಶಕರುಗಳಾದ ಪ್ರಕಾಶ್ ಕೆ.ಬಿ ಹಾಗೂ ಮಧುಕರ್ ಕೆ.ಸಿ ಉಪಸ್ಥಿತರಿದ್ದರು.