ಮಡಿಕೇರಿ ಡಿ.9 NEWS DESK : ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಸಮೂಹದ ಅಭ್ಯುದಯದ ಕುರಿತು ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೇರಿದ ನಂತರ ಈಡೇರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಕೇವಲ ಮೌಖಿಕ ಹೇಳಿಕೆಗಳಿಗಷ್ಟೇ ಸರ್ಕಾರ ಸೀಮಿತವಾಗಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ, ಈ ಸಂಬಂಧ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಡಿ.10 ರಂದು ಉಡುಪಿಯಿಂದ ‘ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ’ವನ್ನು ಆಯೋಜಿಸಲಾಗಿದೆ ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳವಾರದಿಂದ ಆರಂಭಗೊಳ್ಳುವ ಜಾಥಾ ಆರು ದಿನಗಳ ಕಾಲ ಸಾಗಿ ಬೆಳಗಾವಿಯಲ್ಲಿ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಸರ್ಕಾರದ ಮುಂದೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು. ಜಾಥಾವು ಉಡುಪಿಯಿಂದ ಆರಂಭಗೊಂಡು ದಕ್ಷಿಣ ಕನ್ನಡ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ಧಾರಾವಾಡ ಮಾರ್ಗವಾಗಿ ಬೆಳಗಾವಿಗೆ ತೆರಳಲಿದೆ ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣಾ ಹಂತದಲ್ಲಿ ಕಾಂಗ್ರೆಸ್ ಪಕ್ಷವು, ಈ ಹಿಂದಿನ ಬಿಜೆಪಿ ಸರ್ಕಾರ ರದ್ದಗೊಳಿಸಿದ್ದ ಅಲ್ಪಸಂಖ್ಯಾತರ 2ಬಿ ಮೀಸಲಾತಿಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿತ್ತು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಚಾರವೆತ್ತುತ್ತಿಲ್ಲ. ದಲಿತ ಸಮುದಾಯಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಕಾಂತರಾಜು, ಹಾವನೂರು ವರದಿಗಳಿಗೆ ಸರ್ಕಾರ ಅನುಮೋದನೆ ನೀಡಿ, ಒಳಮೀಸಲಾತಿ ಸೌಲಭ್ಯವನ್ನು ಒದಗಿಸಲು ಯಾಕೆ ಮುಂದಾಗುತ್ತಿಲ್ಲವೆಂದು ಪ್ರಶ್ನಿಸಿದರು. ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಸಂವಿಧಾನದ ಆಶಯದಂತೆ ಸಮಾಜದ ಅಲ್ಪಸಂಖ್ಯಾತ, ಶೋಷಿತ, ದಲಿತ ಸಮುದಾಯಗಳಿಗೆ ಮೀಸಲಾತಿಯನ್ನು ಒದಗಿಸಿ, ಶೈಕ್ಷಣಿಕ ಭದ್ರತೆಯೊಂದಿಗೆ ಅವರ ಶ್ರೇಯೋಭಿವೃದ್ಧಿಗೆ ಸರ್ಕಾರ ಅಗತ್ಯ ನಿಲುವು ನಿರ್ಧಾರ ತಳೆಯಬೇಕು. ಹೀಗಿದ್ದೂ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯ ಸರ್ಕಾರದಲ್ಲಿ ತೋರಿದ್ದ ದಿಟ್ಟತನದ ಆಡಳಿತ ಮತ್ತು ನಿರ್ಧಾರಗಳನ್ನು ಎರಡನೇ ಅವಧಿಯಲ್ಲಿ ತೋರಿಲ್ಲ. ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ಅವರು ‘ಹಿಟ್ ಅಂಡ್ ರನ್’ ನಿಲುವು ತಲೆದಿದ್ದು, ಅವರ ಧೈರ್ಯ ಕುಗ್ಗಿದೆಯೆಂದು ಟೀಕಿಸಿದರು. ಹಿಂದಿನ ಬಿಜೆಪಿ ಅವಧಿಯಲ್ಲಿ ಸ್ಥಗಿತಗೊಳಿಸಿದ್ದ ಅಲ್ಪಸಂಖ್ಯಾತರ 2ಬಿ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಮರು ಜಾರಿ ಮಾಡುವುದರೊಂದಿಗೆ, ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ಮೀಸಲಾತಿ ಜಾರಿ ಸೇರಿದಂತೆ ವಿವಿಧ ನಿರ್ಧಾರಗಳನ್ನು ತಳೆಯಲು ಕಾಂಗ್ರೆಸ್ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಅಲ್ಪಸಂಖ್ಯಾತ ಸಮೂಹವನ್ನು ತಮ್ಮ ಮತ ಬ್ಯಾಂಕ್ ಎಂದು ಎಣಿಸಿರುವ ಈ ಮಂದಿಗೆ ಮುಂಬರುವ ದಿನಗಳಲ್ಲಿ ಜನತೆಯೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಜಾತಿ ಜನಗಣತಿ ಬೇಡವೆನ್ನುವ ಅನಿಸಿಕೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರು ವ್ಯಕ್ತಪಡಿಸಿರುವುದು ಸರಿಯಲ್ಲ. ಜಾತಿ ಗಣತಿಯ ಮೂಲಕ ಆಯಾ ಸಮೂಹಗಳ ಅಭಿವೃದ್ಧಿಗೆ ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ವಕ್ಫ್ ಆಸ್ತಿಗಳ ವಿಚಾರವಾಗಿ ಕೇಂದ್ರದ ಬಿಜೆಪಿ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸದಿರುವ ನಿರ್ಣಯವನ್ನು ಸದನದಲ್ಲಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಅವರು, ಮುಂಬರುವ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ಅಮೀನ್ ಮೊಹಿಸಿನ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಷೀರ್, ಜಿಲ್ಲಾ ಖಜಾಂಚಿ ಎಂ.ಎ.ಮನ್ಸೂರ್ ಹಾಗೂ ನಗರ ಸಮಿತಿ ಅಧ್ಯಕ್ಷ ರಿಜ್ವಾನ್ ಉಪಸ್ಥಿತರಿದ್ದರು.