ಮಡಿಕೇರಿ ಡಿ.9 NEWS DESK : ಕೊಡಗು ಜಿಲ್ಲೆಯಲ್ಲಿರುವ ನಿವೇಶನ ರಹಿತ ಪರಿಶಿಷ್ಟರಿಗೆ ನಿವೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ದಕ್ಷಿಣ ಕೊಡಗಿನ ಹೈಸೊಡ್ಲೂರುವಿನಿಂದ ಪೊನ್ನಂಪೇಟೆ ವರೆಗೆ ಭೂಮಿಗಾಗಿ ಕಾಲ್ನಡಿಗೆ ಜಾಥ ಹೋರಾಟವನ್ನು ನಡೆಸಿತು. ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ವರೆಗೆ ಸುಮಾರು 15 ಕಿ.ಮೀ ದೂರ ಕ್ರಮಿಸಿದ ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಸರಕಾರಿ ಜಮೀನನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿರುವ ಶ್ರೀಮಂತರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ನೀಡಬಾರದು. ಮೇಲ್ವರ್ಗದ ಮಂದಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬಾರದು. ನಿವೇಶನವಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಪರಿಶಿಷ್ಟರಿಗೆ ಕೃಷಿಭೂಮಿ ಮತ್ತು ನಿವೇಶನ ನೀಡಬೇಕು. ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ದಲಿತರ ಮೇಲೆ ನಡೆಯುತಿರುವ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗ ಸ್ವಾಮಿ, ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ಕೋಡಿಗಲ್ ರಮೇಶ್, ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಗೋವಿಂದಪ್ಪ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕರಾದ ಎಂ.ವಿ.ಭವಾನಿ ಸೇರಿದಂತೆ ಜಿಲ್ಲೆಯ ಮುಖಂಡರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿದರು.