ಸೋಮವಾರಪೇಟೆ ಡಿ.10 NEWS DESK : ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗೌಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಶ್ರೀ ನವದುರ್ಗ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಉದ್ಘಾಟಿಸಿದರು. ಆರೋಗ್ಯವಂತರು ನಿಯಮಿತ ರಕ್ತದಾನದಿಂದ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ದೇಹದಲ್ಲಿ ಕಬ್ಬಿಣಾಂಶ ಸಮತೋಲನದಲ್ಲಿಡುತ್ತದೆ. ಹೃದಯಾಘಾತದಿಂದ ಪಾರಾಗಬಹುದು ಎಂದು ಹೇಳಿದರು. ರಕ್ತದಾನದ ಮಹತ್ವದ ಬಗ್ಗೆ ಗ್ರಾಮೀಣ ಜನರಲ್ಲೂ ಜಾಗೃತಿ ಮೂಡಿದೆ. ಗ್ರಾಮೀಣ ಭಾಗದಲ್ಲೂ ರಕ್ತದಾನ ಶಿಬಿರಗಳು ನಡೆಯುತ್ತಿವೆ ಎಂದು ಹೇಳಿದರು. ರಕ್ತದಾನದಿಂದ ಇನ್ನೊಂದು ಜೀವ ಉಳಿಸುವುದರ ಜೊತೆಗೆ ದಾನಿಗಳ ದೇಹದಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಧರಣೇಶ್ ಇದ್ದರು. 20 ಮಂದಿ ರಕ್ತದಾನ ಮಾಡಿದರು.