ಬೆಂಗಳೂರು ಡಿ.10 NEWS DESK : ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಎಸ್ಎಂ ಕೃಷ್ಣ ( 92) ವಿಧಿವಶರಾಗಿದ್ದಾರೆ. ಮಾಜಿ ಕೇಂದ್ರ ಸಚಿವರೂ ಆಗಿದ್ದ ಅವರು ಬೆಂಗಳೂರಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ನಸುಕಿನ 2.45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ (ಡಿ.11) ಅಂತ್ಯಕ್ರಿಯೆ ನಡೆಯಲಿದೆ. ಎಸ್ಎಂ ಕೃಷ್ಣ ಅವರು ಪತ್ನಿ ಪ್ರೇಮಾ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ರಾಜ್ಯದಲ್ಲಿ 3 ದಿನ ಶೋಕಾಚರಣೆ :: ಎಸ್ಎಂ ಕೃಷ್ಣ ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ 3 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ್ದು, ಇದೇ ವೇಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಡಿಸೆಂಬರ್ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದ್ದು, ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಡ್ಯ ಹೈದನ ಅಮೆರಿಕ ಪದವಿ :: ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ 1932 ರ ಮೇ 1ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಎಸ್ಎಂ ಕೃಷ್ಣ ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್ನಿಂದಲೂ ಪದವಿ ಪಡೆದಿದ್ದರು.
ರಾಜಕೀಯ ಪ್ರವೇಶ :: 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಗೆಲುವು ಸಾಧಿಸಿದ ಕೃಷ್ಣ ಆ ಮೂಲಕ ಚುನಾವಣಾ ರಾಜಕೀಯ ಜೀವನಕ್ಕೆ ಧುಮುಕಿದ್ದರು. ಆ ಬಳಿಕ ಅವರು ‘ಪ್ರಜಾ ಸೋಷಿಯಲಿಸ್ಟ್ ಪಕ್ಷ’ಕ್ಕೆ ಸೇರಿದ್ದರು. ಆದರೆ 1967 ರ ಚುನಾವಣೆಯಲ್ಲಿ ಮದ್ದೂರಿನಿಂದ ಕಾಂಗ್ರೆಸ್ನ ಎಂಎಂ ಗೌಡ ವಿರುದ್ಧ ಸೋಲನುಭವಿಸಿದ್ದರು. 1968 ರಲ್ಲಿ ಹಾಲಿ ಸಂಸದರು ನಿಧನರಾದಾಗ ಅವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ರಾಷ್ಟ್ರ ರಾಜಕೀಯಕ್ಕೆ ಅಡಿಯಿಟ್ಟರು. 1968 ರ ಉಪಚುನಾವಣೆಯ ನಂತರ ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದರು. 1971 ಮತ್ತು 1980 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗಳನ್ನು ಗೆದ್ದಿದ್ದರು. ಆಗ ಮಂಡ್ಯವನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿಸುವಲ್ಲಿ ಎಸ್ಎಂ ಕೃಷ್ಣ ಪಾತ್ರ ಪ್ರಮುಖವಾದದ್ದಾಗಿತ್ತು. ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ನಲ್ಲೇ ಪ್ರಬಲ ನಾಯಕರಾಗಿದ್ದ ಎಸ್ಎಂ ಕೃಷ್ಣ, ರಾಜಕೀಯ ಜೀವನದ ಕೊನೆಗಾಲದಲ್ಲಿ, 2017 ರ ಜನವರಿ 29 ರಂದು ಕಾಂಗ್ರೆಸ್ ದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2017 ರ ಮಾರ್ಚ್ನಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು.