
ಸೋಮವಾರಪೇಟೆ ಡಿ.13 NEWS DESK : ಕಳೆದ ಅಕ್ಟೋಬರ್‍ನಲ್ಲಿ ನಡೆದ ವಾಣಿಜ್ಯ ಮಳಿಗೆಗಳ ಹರಾಜನ್ನು ರದ್ದುಪಡಿಸಿ, ಮರು ಇ-ಟೆಂಡರ್ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಆಗ್ರಹಿಸಿದರು. ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಟೆಂಡರ್‍ನಲ್ಲಿ ಅಕ್ರಮ ನಡೆದಿದೆ ಎಂದು ಎಲ್ಲಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಟೆಂಡರ್‌ದಾರರ ಹೆಸರು, ಮಳಿಗೆ ಸಂಖ್ಯೆಗಳು ಮಧ್ಯವರ್ತಿಗಳ ಕೈಸೇರಿವೆ. ಪಂಚಾಯಿತಿ ಕಚೇರಿಯಲ್ಲಿ ಗೌಪ್ಯವಾಗಿರಬೇಕಾದ ಮಾಹಿತಿಗಳು ಸೋರಿಕೆಯಾಗಿರುವ ಕಾರಣ ಮಧ್ಯವರ್ತಿಗಳು ಡೀಲ್‍ಗೆ ಇಳಿಯಲು ಕಾರಣವಾಗಿದೆ. ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಮಾಹಿತಿ ಸೋರಿಕೆ ಮಾಡಿದ್ದಾರೆ. ಈ ಬಗ್ಗೆ ಅಧ್ಯಕ್ಷರು ವಿವರಣೆ ನೀಡಬೇಕು. ಸೂಕ್ತ ಕ್ರಮಕೈಗೊಳ್ಳಬೇಕೆಂದು ಸರ್ಕಾರಿ ನಾಮನಿರ್ದೇಶನ ಸದಸ್ಯರಾದ ಡಿ.ಯು.ಕಿರಣ್, ವಿನಯ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಬಿ.ಸಂಜೀವ, ಜೀವನ್ ಆಗ್ರಹಿಸಿದರು. ನಿಯಮದಂತೆ ಟೆಂಡರ್ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೆ, ಬಿಡ್‍ದಾರರ ಹೆಸರು ಸೋರಿಕೆಯಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಸದಸ್ಯರ ಆರೋಪವೂ ಸರಿಯಾಗಿದೆ. ಸದಸ್ಯರ ತೀರ್ಮಾನದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಟೆಂಡರ್‍ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿವರಣೆಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಇ ಟೆಂಡರ್ ಮಾಡುವಂತೆ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸೋಮವಾರಪೇಟೆ ಪಟ್ಟಣದಲ್ಲಿ ಸಂತೆ ದಿನ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಸಾರ್ವಜನಿಕರಿಗೆ ದೊಡ್ಡಮಟ್ಟದ ಕಿರಿಕಿರಿ ಆಗುತ್ತಿದೆ. ಪಟ್ಟಣದಲ್ಲಿ ಪೊಲೀಸರು ಇರುವ ಬಗೆಯೇ ಅನುಮಾನ ವ್ಯಕ್ತವಾಗಿದೆ. ಟ್ರಾಫಿಕ್ ವಿಷಯದಲ್ಲಿ ಖಾಸಗಿ ಬಸ್‍ಸ್ಟಾಂಡ್‍ನಲ್ಲಿ ರಾಜರೋಷವಾಗಿ ಹೊಡೆದಾಡಿಕೊಂಡರು ಕೇಳುವವರು ಇಲ್ಲದಂತಾಗಿದೆ. ಪೊಲೀಸರು ಇನ್ನಾದರೂ ಕ್ರಮಕೈಗೊಳ್ಳದಿದ್ದರೆ ಶಾಸಕರಾದ ಡಾ.ಮಂತರ್‍ಗೌಡ ಅವರಿಗೆ ನೇರವಾಗಿ ದೂರು ನೀಡುವಂತೆ ಸಭೆ ತೀರ್ಮಾನಿಸಿತು. ಕೆಎಸ್‍ಆರ್‍ಟಿಸಿ ಮುಂಭಾಗದಲ್ಲಿ ಮಾನವೀಯತೆ ದೃಷ್ಟಿಯಿಂದ ಆಟೋ ನಿಲ್ದಾಣಕ್ಕೆ ಜಾಗ ನೀಡಲಾಗಿದೆ. ಕೆಎಸ್‍ಆರ್‍ಟಿಸಿ ಗೇಟ್‍ನಿಂದ, ಸಿ.ಕೆ.ಸುಬ್ಬಯ್ಯ ರಸ್ತೆಗೆ ಸಂಪರ್ಕ ರಸ್ತೆಯಿದ್ದು, ಅ ರಸ್ತೆಯಲ್ಲಿ ಬೈಕ್‍ಗಳು ಸಂಚರಿಸಿದರೆ ಕೆಲ ಆಟೋ ಚಾಲಕರು ತಡೆದು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವಿದೆ. ಜೇಸಿ ವೇದಿಕೆಯ ಮುಂಭಾಗ ಹೆಚ್ಚಿನ ಬಾಡಿಗೆ ಕೊಟ್ಟು ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡಿದ್ದಾರೆ. ಮಳಿಗೆಗಳ ಮುಂದೆ ದಿನವಿಡಿ ಆಟೋಗಳನ್ನು ನಿಲ್ಲಿಸಿದರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಆಟೋಗಳು ನಿಲ್ಲಲು ನಿಗದಿತ ಸ್ಥಳವನ್ನು ಗುರುತಿಸಿಕೊಡಬೇಕು. ಪಂಚಾಯಿತಿ ನಿಯಮವನ್ನು ಪಾಲಿಸುವಂತೆ ತಿಳಿಸಬೇಕು. ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಸೂಚಿಸಿದರು. ವಾರ್ಡ್ ಸದಸ್ಯರು, ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಕ್ಕೆ ಜನರು ಆಯ್ಕೆ ಮಾಡಿದ್ದಾರೆ. ಆದರೆ ಪಂಚಾಯಿತಿ ಸಿಬ್ಬಂದಿಯೋರ್ವರು ಬೇರೆಯವರ ಕೆಲಸ ಮಾಡಿಸಿಕೊಡಲು ಯಾಕೆ ಬರುತ್ತೀರಾ ಎಂದು ಪ್ರಶ್ನಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ನಿವೃತ್ತ ಡಿವೈಎಸ್ಪಿ ಒಬ್ಬರಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಇದು ಸದಸ್ಯರಿಗೆ ಆಗುತ್ತಿರುವ ಅವಮಾನ ಎಂದು ಸದಸ್ಯ ಮೃತ್ಯುಂಜಯ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ನನಗೆ ಅವಮಾನ ಮಾಡಿದ ಮಹಿಳಾ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ಕಳೆದ 15 ವರ್ಷಗಳಿಂದ ನಿಯಮಬಾಹಿರವಾಗಿ ಈ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಅವರ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಬಿ.ಆರ್.ಮಹೇಶ್ ಅವಿರೋಧ ಆಯ್ಕೆಯಾದರು. ಇದೀಗ ವರ್ಗಾವಣೆಗೊಂಡಿರುವ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಪಿ.ಕೆ.ಚಂದ್ರ, ನಾಗರತ್ನ, ಶುಭಾಕರ್, ಎಚ್.ಎ.ನಾಗರಾಜ್ ಮುಖ್ಯಾಧಿಕಾರಿ ಸತೀಶ್ ಇದ್ದರು.









